ತೋಳದ ದಾಳಿ: ಗಾಯಗೊಂಡವರಿಗೆ ಪರಿಹಾರ ಕೊಡಿ
ಶಹಾಪುರ: ಇತ್ತೀಚಿಗೆ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಸಮೀಪ ಹುಚ್ಚು ಹಿಡಿದ ತೋಳವೊಂದು ಮಹಿಳೆಯರು ಸೇರಿದಂತೆ ಮೂವರು ಬಾಲಕರಿಗೂ ಕಡಿದು ಗಂಭೀರ ಸ್ವರೂಪದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಬಂಧಿಸಿದ ಪಂಚಾಯತಿ ಮತ್ತು ತಾಲೂಕಾ ಆಡಳಿತದ ಗಮನಕ್ಕೆ ಬಂದಿದ್ದರೂ ಇಲ್ಲಿಯವರೆಗೆ ಗಾಯಗೊಂಡವರಿಗೆ ಯಾವುದೇ ರೀತಿಯ ನೆರವು ನೀಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ನೀಲಮ್ಮ ಸುಭಾಸಪ್ಪಗೌಡ, ರೇಣುಕಮ್ಮ ಭೀಮಣ್ಣ, ನರಸಮ್ಮ ಕಾಶೀರಾಜ, ಹಣಮಂತ ಅಮರೇಶ, ಪುನೀತ ಮಲ್ಲಪ್ಪ ಮತ್ತು ಸಾದ್ಯಾಪುರದ ಕೊಂಡಪ್ಪ ರಾಮಣ್ಣ ಎಂಬುವವರಿಗೆ ತೋಳ ಕಡಿದಿದ್ದು ಇದರ ಜೊತೆಗೆ ದನಕರುಗಳ ಮೇಲೂ ದಾಳಿ ಮಾಡಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತೋಳದ ದಾಳಿಗೆ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚ ಭರಿಸುವಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.