ವಿಜ್ಞಾನ ಜನಪ್ರಿಯಗೊಳಿಸಿ
ಗುಲ್ಬರ್ಗ: ವಿಜ್ಞಾನವನ್ನು ಮಾತೃಭಾಷೆಯ ಮೂಲಕ ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಹಾಗೂ ಶೈಕ್ಷಣಿಕ ವಲಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ತೀರ ಅಗತ್ಯ ಎಂದು ಗುವಿವಿ ಕುಲಪತಿ ಈ.ಟಿ ಪುಟ್ಟಯ್ಯ ಹೇಳಿದರು.
ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಗುಲ್ಬರ್ಗ ವಿವಿ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿದೆ. ವಿಜ್ಞಾನದಿಂದ ಸಾಕಷ್ಟು ಪ್ರಯೋಜನ ಪಡೆದಿರುವ ಕೈಗಾರಿಕಾ ರಂಗವು ವಿಜ್ಞಾನ ಹೂಡಿಕೆ ಮಾಡಬೇಕಾಗಿದೆ. ವಿಜ್ಞಾನದ ಪ್ರಗತಿ ರಾಷ್ಟ್ರದ ಪ್ರಗತಿ. ಯಾವುದೇ ಒಂದು ರಾಷ್ಟ್ರದ ಪ್ರಗತಿಯಾಗಬೇಕಾದರೆ ಆ ರಾಷ್ಟ್ರದ ವಿಜ್ಞಾನದ ಪ್ರಗತಿಯನ್ನು ಅವಲಂಬಿಸಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಸ್.ಕೆ. ಸಾತನೂರು ಮಾತನಾಡಿ, ನಮ್ಮ ಪಾಲಕರು ಮತ್ತು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನೀಯರಿಂಗ್ ಕ್ಷೇತ್ರಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರಿಂದ ಮೂಲ ವಿಜ್ಞಾನ ಕ್ಷೇತ್ರ ಕಡೆಗಣನೆ ಆಗುತ್ತಿದೆ ಎಂದರು.
ಗಿರೀಶ ಕಡ್ಲೇವಾಡ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ.ಆರ್. ಬಡಿಗೇರ ಸ್ವಾಗತಿಸಿದರು. ರಾಜಾಸಮರಸೇನ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಗಮೇಶ ಹಿರೇಮಠ ವಂದಿಸಿದರು.