ವೈದ್ಯರ ನಿರ್ಲಕ್ಷ್ಯ; ಆಸ್ಪತ್ರೆ ಮುಂದೆ ಶವವಿಟ್ಟು ಧರಣಿ
ಗುಲ್ಬರ್ಗ: ವೈದ್ಯರ ನಿರ್ಲಕ್ಷ್ಯದಿಂದಾಗಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಗೃಹಿಣಿ ಮೃತಪಟ್ಟಿದ್ದಾಳೆ ಎಂದು ಅವರ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಸೇರಿ ಶವದೊಂದಿಗೆ ಪ್ರತಿಭಟನೆಗಿಳಿದ ಪ್ರಸಂಗ ಸೋಮವಾರ ಗುಲ್ಬರ್ಗದ ಶಾಂತಿ ನಗರದಲ್ಲಿರುವ ಖಾಸಗಿ ಆಸ್ಪತ್ರೆ ಮುಂದೆ ನಡೆದಿದೆ.
ಬ್ರಹ್ಮಪುರದ ಚೌಡೇಶ್ವರಿ ಕಾಲೋನಿಯ ಶೀಲಾ ರಾಜಶೇಖರ (28) ಅಪೆಂಡಿಕ್ಸ್ ತೊಂದರೆ ಎಂದು ಬಸ್ ನಿಲ್ದಾಣದ ಮುಂದಿರುವ ಶಾಂತಿನಗರದ ಅಂಚಲ್ಲಿನ ಶೋಭಾ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಸಹ ನೆರವೇರಿಸಿದ್ದರು. ನಂತರ ಮನೆಯಲ್ಲಿ ಬಳಲಿದಂತೆ ಕಂಡಾಗ ಮತ್ತೆ ಬಂಧುಗಳು ಶೀಲಾಳೊಂದಿಗೆ ಆಸ್ಪತ್ರೆಗೆ ಬಂದಾಗ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಲ್ಲಿಗೆ ಕರೆದೊಯ್ದರೂ ಸಮಸ್ಯೆ ನಿವಾರಣೆ ಕಾಣಲಿಲ್ಲ, ನಂತರ ಸೊಲ್ಲಾಪುರಕ್ಕೆ ಕರೆದೊಯ್ಯಲಾಯ್ತು. ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೆ ಶೀಲಾ ಸೋಮವಾರ ಸಾವನ್ನಪ್ಪಿದರು. ಈ ಸುದ್ದಿ ಗುಲ್ಬರ್ಗದ ಅವರ ಬಂಧುಗಳಿಗೆ ತಿಳಿಯುತ್ತಿದ್ದಂತೆಯೇ ಎಲ್ಲರೂ ಗುಂಪಾಗಿ ಆಸ್ಪತ್ರೆ ಮುಂದೆ ಜಮಾಯಿಸಿದರಲ್ಲದೆ ಅಲಕ್ಷತನದಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯರ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದರು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಯನ್ನು ನಿಯಂತ್ರಿಸಿದರು. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಮೃತಪಟ್ಟಿರುವ ಶೀಲಾ ಸಂಬಂಧಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಆಸ್ಪತ್ರೆಗೆ ಬಂದೋಬಸ್ತ್ ನೀಡಿದ್ದಾರೆ. ಸೋಮವಾರ ಇಡೀದಿನ ಆಸ್ಪತ್ರೆ ಮುಂದೆ ಮೃತ ಶೀಲಾರ ಬಂಧುಗಳು, ನೆಂಟರ ಗುಂಪಿನಿಂದ ಪ್ರತಿಭಟನೆ ಮುಂದುವರಿದಿತ್ತು.