ಎಪಿಎಂಸಿ ಅವ್ಯವಸ್ಥೆಗೆ ಆಕ್ರೋಶ
ಅಫಜಲ್ಪುರ:ಪಟ್ಟಣದ ಆದರ್ಶ ನಗರದಲ್ಲಿನ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿ.ಪಂ ಸದಸ್ಯ ಪ್ರಕಾಶ ಜಮಾದಾರ ದಿಢೀರ್ ಭೇಟಿ ನೀಡಿ ಅವ್ಯವಸ್ಥೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಗುಲ್ಬರ್ಗ ಜಿಲ್ಲೆ ತೊಗರಿ ಬೆಳೆಯನ್ನು ಹೆಚ್ಚು ಬೆಳೆಯುತ್ತದೆ. ಅದರಲ್ಲಿ ಅಫಜಲ್ಪುರ ತಾಲೂಕು ಅತಿ ಹೆಚ್ಚಿಗೆ ತೊಗರಿ ಬೆಳೆಯುತ್ತದೆ. ಜ. 2ರಿಂದ ತೊಗರಿ ಖರೀದಿ ಕೇಂದ್ರ ಪ್ರಾರಂಭ ಮಾಡಿದ್ದೀರಿ. ಒಟ್ಟು 1,700 ಜನ ರೈತರು ಹೆಸರು ನೋಂದಾಯಿಸಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ 640 ರೈತರ ತೊಗರಿ ಮಾತ್ರ ಖರೀದಿ ಮಾಡಿದ್ದೀರಿ. ಇನ್ನೂ ಶೇ.70 ರಷ್ಟು ರೈತರು ಬೆಳೆದ ಬೆಳೆಯನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಸರದಿಗಾಗಿ ಕಾಯುತ್ತ ಕುಳಿತಿದ್ದಾರೆ. ಖರೀದಿ ಬಹಳಷ್ಟು ನಿಧಾನಗತಿಯಲ್ಲಿ ಸಾಗಿದೆ. ಪ್ರತಿನಿತ್ಯ ಕೆಲ ರೈತರ ತೊಗರಿ ಗುಣಮಟ್ಟ ಸರಿಯಾಗಿಲ್ಲ ಎಂದು ವಾಪಸ್ ಕಳುಹಿಸುತ್ತಿರುವುದಾಗಿ ತಿಳಿದು ಬಂದಿದೆ. ವರ್ಷವಿಡಿ ಕಷ್ಟ ಪಟ್ಟು ಬೆಳೆದ ರೈತರ ಶ್ರಮಕ್ಕೆ ಪ್ರತಿಫಲ ಸಿಗಲಿಲ್ಲವೆಂದರೆ ಹೇಗೆ ಎಂದು ಕಿಡಿ ಕಾರಿದರು. ಎಪಿಎಂಸಿ ಅಧಿಕಾರಿ ಚಂದ್ರಮೋಹನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ರೈತರ ಸಮಸ್ಯೆ ಪರಿಹಾರಕ್ಕೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಇನ್ನೊಂದು ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಚೌಡಾಪುರ, ಕರ್ಜಗಿಗಳಲ್ಲಿಯೂ ಕೂಡ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ತಾ.ಪಂ ಸದಸ್ಯ ದತ್ತು ಸಿಂಧೆ ಉಪಸ್ಥಿತರಿದ್ದರು.