'ಹೈ-ಕ ಶಾಂತಿ ಸ್ನೇಹದ ಪ್ರದೇಶ'
ಚಿಂಚೋಳಿ: ಹೈ-ಕ ಪ್ರದೇಶದಲ್ಲಿ ಸೂಫಿ ಸಂತರು, ಶರಣರು ಬಾಳಿ ಬೆಳಗಿದ ಪ್ರದೇಶವಾಗಿರುವುದರಿಂದ ಹೈ-ಕ ಪ್ರದೇಶವು ಶಾಂತಿ ಸ್ನೇಹದಿಂದ ಕೂಡಿದೆ ಎಂದು ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದರು.
ಪಟ್ಟಣದಲ್ಲಿ ಮುಸ್ಲಿಮರು ಇಸ್ಲಾಂ ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಶಿರಾತುಲ್ ನಬೀ ಇ ಜುಲ್ಸ್-ಎ- ಜಲ್ಸಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಜ್ ಯಾತ್ರೆ ಕೈಕೊಳ್ಳುವ ಹಜ್ ಯಾತ್ರಿಗಳಿಗೆ ಹಜ್ ಹೌಜ್ ನಿರ್ಮಿಸಲಾಗುತ್ತಿದೆ. ಬೀದರ್, ಬೆಳಗಾವಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಹೌಜ್ ನಿರ್ಮಿಸಲಾಗುತ್ತಿದೆ.
ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ 10 ಲಕ್ಷ ನೀಡಲಾಗುತ್ತಿದೆ. ಮೆಟ್ರಿಕ್‌ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಒಟ್ಟು 50 ಕೋಟಿಯಿಂದ 52 ಕೋಟಿಗೆ ಅನುದಾನ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ 107 ವಿದ್ಯಾರ್ಥಿಗಳಿಗೆ ಐಪಿಎಸ್ ತರಬೇತಿ ನೀಡಲಾಗುತ್ತಿದೆ. 40 ವರ್ಷ ಮೀರಿದ ಮಹಿಳೆಯರಿಗೆ ಮನಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಹೈಕ ಪ್ರದೇಶದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ಇಲ್ಲಿ ಸೂಫಿ ಸಂತರು ಶರಣರು ಕೂಡಿ ಬಾಳಿದ ಶಾಂತಿ ಮತ್ತು ಸ್ನೇಹದಿಂದ ಕೂಡಿದ ಪ್ರದೇಶವಾಗಿದೆ. ಚಿಂಚೋಳಿ ಮತಕ್ಷೇತ್ರವು ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಇದರ ಅಭಿವೃದ್ಧಿಗೆ ಹೈ.ಕ. ಮಂಡಳಿಯಿಂದ 100 ಕೋಟಿ ಹೆಚ್ಚಿನ ಅನುದಾನ ಸಿಗಲಿದೆ ಎಂದು ಖಮರುಲ್ ಇಸ್ಲಾಂ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಪಪಂ ಸದಸ್ಯ ಅಬ್ದುಲ್ ಬಾಸೀತ ವಹಿಸಿದ್ದರು. ಶಾಸಕ ಡಾ. ಉಮೇಶ ಜಾಧವ್, ಅಬ್ದುಲ್ ಖಯ್ಯೂಮ್, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ, ಅಸಾದುಲ್ ಅನಸಾರಿ, ಕೆ.ಎಂ. ಬಾರಿ, ರಾಮಚಂದ್ರ ಜಾಧವ್, ಅಮಜದ್ ಅಲಿ ಸಾಹೇಬ್, ಗುಡುಸಾಬ್ ಕುರೇಶಿ, ಮುಸ್ತಾಪಾ, ಇಬ್ರಾಹಿಂ ಸಾಹೇಬ್, ಪರೀಧ್ ಇದ್ದರು. ಕೆ.ಎಂ. ಹಾಶ್ಮಿ ಸ್ವಾಗತಿಸಿದರು. ಮಹ್ಮದ ಅಮಜದ್ ವಂದಿಸಿದರು.