ಮಾತೃಮಿಲನ ಕಾರ್ಯಕ್ರಮ
ಕೆಂಭಾವಿ: ಸಮೀಪದ ಮುದನೂರಿನ ವಿದ್ಯಾಭಾರತಿ ಪ್ರಾಥಮಿಕ ಶಾಲೆಯಲ್ಲಿ ಮಾತೃಮಿಲನ ಕಾರ್ಯಕ್ರಮ ಬಸವ ಸಿದ್ದಾರೂಢ ಆಶ್ರಮ ಹುಣಶ್ಯಾಳ ಇವರ ಸಾನ್ನಿಧ್ಯದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಕಕ್ಕೇರಾ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕಿ ಸಯೀದಾ ಬೇಗಂ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸ್ತ್ರೀಯರಿಗೆ ಅಭದ್ರತೆಯ ಭಯ ಕಾಡುತ್ತಿದ್ದು ಎಲ್ಲಾ ರಂಗಗಳಲ್ಲೂ ಇವರಿಗೆ ರಕ್ಷಣೆಯ ಅಗತ್ಯವಿದೆ. ಇಂತಹ ಸನ್ನಿವೇಶದಲ್ಲಿ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರು ಸುನೀತಾ ತೋಟದ ವಹಿಸಿದ್ದರು.
19ರಂದು ಅರ್ಥಪೂರ್ಣ ಶಿವಾಜಿ ಜಯಂತಿ ಆಚರಣೆ
ಯಾದಗಿರಿ: ಜಿಲ್ಲಾ ಆಡಳಿತದ ವತಿಯಿಂದ ಫೆ. 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಕರಾಳೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶಿವಾಜಿ ಜಯಂತಿ ಆಚರಣೆ ಕುರಿತು ನಡೆದ ಪೂರ್ವಸಿದ್ಧ್ದತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಂದು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಶಿವಾಜಿ ಜಯಂತಿ ಆಚರಿಸಬೇಕು. ನಂತರ ನಗರದ ವಿದ್ಯಾಮಂಗಲ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಮುಖ್ಯ ಸಮಾರಂಭ ನಡೆಯಲಿದೆ. ಸಭೆಯಲ್ಲಿ ಉಪ-ವಿಭಾಗಾಧಿಕಾರಿ ಪಿ. ವಿಜಯಕುಮಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟಣೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.