ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆ: ಡಿಜಿಪಿ ವಜೀರ್ ಅಹ್ಮದ್
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.12
ರಾಜ್ಯದಲ್ಲಿರುವ ವಿಮಾನ ನಿಲ್ದಾಣ, ವಿದ್ಯುತ್ ಯೋಜನೆಗಳು, ಜಲಾಶಯಗಳಂಥಹ ಸೂಕ್ಷ್ಮ ಸ್ಥಾವರ ಹಾಗೂ ಪ್ರದೇಶಗಳ ಮೇಲೆ ನಿಗಾವಹಿಸಲು ಮತ್ತು ಅವುಗಳಿಗೆ ಸೂಕ್ತ ಭದ್ರತೆ ನೀಡಲು ರಾಜ್ಯ ಸರ್ರ್ಕಾರವು ಕೇಂದ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ರೂಪಿಸಿದೆ ಎಂದು ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕ ಮೋಹ್ಮದ್ ವಜೀರ್ ಅಹ್ಮದ್ ತಿಳಿಸಿದ ರು.
ಗುಲ್ಬರ್ಗ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಉದ್ಘಾಟಿಸಿ ಮಾತನಾಡಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯು ಭದ್ರತೆಯನ್ನು ನೀಡಲು ಕಷ್ಟವೆಂದು ಸರ್ಕಾರ ಪರಿಗಣಿಸಿ ಕೈಗಾರಿಕಾ ಭದ್ರತಾ ಪಡೆಯನ್ನು ರಚಿಸಲಾಗಿದೆ. ಇದರಡಿಯಲ್ಲಿ ಸುಮಾರು 1,500ಕ್ಕಿಂತ ಹೆಚ್ಚು ಕಾನ್ಸ್ಟೇಬಲ್ ಹಾಗೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಮುನ್ನೆಚ್ಚರಿಕೆ ಇರಲಿ: ಗುಲ್ಬರ್ಗದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಬುನಾದಿ ತರಬೇತಿಯನ್ನು ಪಡೆಯಲು 435 ಪ್ರಶಿಕ್ಷಣಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೈಗಾರಿಕಾ ಭದ್ರತಾ ಪಡೆಯ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ಮ್ಯಾನುವಲ್ ಕರ್ತವ್ಯ, ಒಳಾಂಗಣ ಹಾಗೂ ಹೊರಾಂಗಣ ತರಬೇತಿಯನ್ನು ನೀಡಲಾಗುವುದು. ಪೊಲೀಸ್ ಇಲಾಖೆಯ ಕೆಲಸ ಯಾವಾಗಲೂ ಸವಾಲಿನಿಂದ ಕೂಡಿದ್ದಾಗಿದೆ. ತರಬೇತಿ ಸಮಯದಲ್ಲೂ ಸಹ ಮುನ್ನೆಚ್ಚರಿಕೆಯಿಂದ ಇರಬೇಕು ಎಂದರು.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಣ್ಣ ಸಣ್ಣ ವಿಷಯಗಳಿಗೆ ಮನೆಯಲ್ಲಿ ಕಲಹ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು. ಇಂಥಹ ಆತ್ಮಹತ್ಯೆಗಳು ಇಲಾಖೆಯಲ್ಲಿ ಹೆಚ್ಚಾಗಿ ಸಂಭವಿಸುತ್ತಿವೆ. ಆತ್ಮಹತ್ಯೆಯು ಎಲ್ಲದಕ್ಕೂ ಪರಿಹಾರವಲ್ಲ. ಸಿಬ್ಬಂದಿ ಆರೋಗ್ಯ ಕಾಪಾಡುವಲ್ಲಿ ಪೊಲೀಸ್ ಇಲಾಖೆಯು ಸದಾ ಬದ್ಧವಾಗಿದೆ ಎಂದರು.
ವಿಶೇಷ ಪಠ್ಯಕ್ರಮ: ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್. ಭಗವಾನದಾಸ್ ಮಾತನಾಡಿ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲು ಆಂತರಿಕ ಭದ್ರತಾ ವಿಭಾಗದಿಂದ ವಿಶೇಷ ಪಠ್ಯಕ್ರಮವನ್ನು ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳು ಸಹಿಷ್ಣುತೆಯನ್ನು ರೂಢಿಸಿಕೊಂಡು ಗುರಿ ಸಾಧನೆ ಮಾಡುವ ಮನೋಬಲವನ್ನು ಹೊಂದಬೇಕು. ರಾಜ್ಯ ಸರ್ಕಾರವು ದೂರ ದೃಷ್ಟಿಯನ್ನಿಟ್ಟು ಕೈಗಾರಿಕಾ ಭದ್ರತಾ ಪಡೆಯನ್ನು ರೂಪಿಸಿದೆ. ಪ್ರಶಿಕ್ಷಣಾರ್ಥಿಗಳು ಉತ್ತಮ ತರಬೇತಿಯನ್ನು ಪಡೆದು ಪರಿಪೂರ್ಣರಾಗುವಂತೆ ಸಲಹೆ ನೀಡಿದರು.
ಉಪ ಪೊಲೀಸ್ ಅಧೀಕ್ಷಕ ಎಂ.ವಿ. ನಾಗನೂರ ಸ್ವಾಗತಿಸಿದರು. ಪಿ.ಐ. ಎನ್.ಎಸ್. ಚಂದ್ರಶೇಖರ ವಂದಿಸಿದರು. ಕಾರ್ಯಕ್ರಮದಲ್ಲಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಬ್ಯಾಹಟ್ಟಿ, ಮತ್ತಿತರರು ಉಪಸ್ಥಿತರಿದ್ದರು.