ಆಂಗ್ಲ ಶಿಕ್ಷಕರ ನಿಯೋಜನೆಗೆ ಆಗ್ರಹ
ಶಹಾಪುರ: ಮತಕ್ಷೇತ್ರ ವ್ಯಾಪ್ತಿಯ ಏವೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸತತ ಮೂರು ವರ್ಷಗಳಿಂದ ಆಂಗ್ಲ ಮಾಧ್ಯಮ ಶಿಕ್ಷಕರ ಕೊರತೆ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೇನು ಎಸ್ಎಸ್ಎಲ್ಸಿ ಪರೀಕ್ಷೆ ಹತ್ತಿರ ಬರುತ್ತಿದೆ. ಶಿಕ್ಷಕರಿಲ್ಲದೆ ವಿದ್ಯಾಥರ್ಥಿಗಳು ಪರದಾಡುತ್ತಿದ್ದಾರೆ. ಕೂಡಲೇ ಈ ಶಾಲೆಗೆ ಇಂಗ್ಲಿಷ್ ಶಿಕ್ಷಕರ ನಿಯೋಜನೆ ಮಾಡಬೇಕು. ತಪ್ಪಿದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶಾಲೆಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಡಿಡಿಪಿಐಗೆ ಬರೆದ ಪತ್ರದಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸೀಮೆಎಣ್ಣೆ ಬಿಡುಗಡೆ
ಯಾದಗಿರಿ: ಜಿಲ್ಲೆಯ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಪಡಿತರದಾರರಿಗೆ ಫೆಬ್ರವರಿ ತಿಂಗಳಿಗಾಗಿನ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಎಎವೈ ಮತ್ತು ಬಿಪಿಎಲ್ ಏಕ ಸದಸ್ಯ ಮತ್ತು ದ್ವಿ ಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ 3 ಲೀಟರನಂತೆ, ಮೂರು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 5 ಲೀಟರನಂತೆ ಹಾಗೂ ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರ ಚೀಟಿಗಳಿಗೆ 3 ಲೀಟರನಂತೆ ಸೀಮೆ ಎಣ್ಣೆ ವಿತರಣೆ ಮಾಡಲಾಗುತ್ತದೆ. ಪಟ್ಟಣ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರ ಚೀಟಿಗಳಿಗೆ ಸೀಮೆಎಣ್ಣೆ ವಿತರಣೆ ಇರುವುದಿಲ್ಲ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿಗಳಿಗೆ ಪ್ರತಿ ಲೀಟರಗೆ ರೂ.17.50 ದರವನ್ನು ನಿಗದಿಪಡಿಸಲಾಗಿದೆ. ಯಾದಗಿರಿ ಜಿಲ್ಲೆಯ ಈ ಪಡಿತರ ಚೀಟಿದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
ಬೋಗಿ ಉತ್ಪಾದನಾ ಕಾರ್ಖಾನೆಗೆ ಶಂಕು
ಯಾದಗಿರಿ: ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಫೆ. 15ರಂದು ಯಾದಗಿರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರೇಲ್ವೆ ಫಿಯಟ್ ಬೋಗಿ ಉತ್ಪಾದನಾ ಕಾರ್ಖಾನೆಗೆ ಶಂಕು ಸ್ಥಾಪನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ್, ಲೋಕಸಭ ಸದಸ್ಯ ಎಸ್. ಫಕೀರಪ್ಪ, ರಾಜ್ಯಸಭ ಸದಸ್ಯರಾದ ಬಸವರಾಜ ಪಾಟೀಲ ಸೇಡಂ, ಶಾಸಕರಾದ ಎ.ಬಿ. ಮಾಲಕರೆಡ್ಡಿ, ರಾಜಾವೆಂಕಟಪ್ಪ ನಾಯಕ್, ಗುರು ಪಾಟೀಲ ಶಿರವಾಳ, ವಿಧಾನ ಪರಿಷತ್ ಸದಸ್ಯರಾದ ಕೆ.ಬಿ. ಶಾಣಪ್ಪ, ಅಲ್ಲಮಪ್ರಭು ಪಾಟೀಲ್, ಅಮರನಾಥ ಪಾಟೀಲ್, ಜಿಲ್ಲಾ ಪಂಚಾಯತ ಅಧ್ಯಕ್ಷ ಭೀಮಮ್ಮ ಚಪೇಟ್ಲಾ, ನಗರಸಭೆ ಅಧ್ಯಕ್ಷ ಮೊಹಮದ್ ಇಶಾಕೆ ಸೇರಿದಂತೆ ಯಾದಗಿರಿ ತಾಲೂಕು ಪಂಚಾಯತ ಅಧ್ಯಕ್ಷರು, ಬಾಡಿಯಾಳ ಗ್ರಾಪಂ ಮತ್ತು ಕಡೇಚೂರ ಗ್ರಾಪಂಅಧ್ಯಕ್ಷರು ಉಪಸ್ಥಿತರಿರುವರು.