ಭಾರತ ನಿರ್ಮಾಣ ಯೋಜನೆ ಸದುಪಯೋಗ ಪಡೆಯಿರಿ
ಗುಲ್ಬರ್ಗ: ಗ್ರಾಮೀಣ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತ ನಿರ್ಮಾಣ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ, ಗ್ರಾಮೀಣ ಆರೋಗ್ಯ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ, ನೀರು ಸರಬರಾಜು ಯೋಜನೆ ಮುಂತಾದ ಮಹಾತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಜಿಪಂ ಉಪಾಧ್ಯಕ್ಷೆ ಅನಿತಾ ವಳಕೇರಿ ಸಲಹೆ ನೀಡಿದರು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಗುಲ್ಬರ್ಗ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, (ಗ್ರಾಮಾಂತರ) ಕಿರಣ ರೂರಲ್ ರಿಕನ್ಸ್ಟ್ರಕ್ಷನ್ ಸೊಸೈಟಿ ಗುಲ್ಬರ್ಗ ಹಾಗೂ ಖಣದಾಳ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಖಣದಾಳ ಜವಾಹರ್ ಯುವಕ ಸಂಘದ ಆವರಣದಲ್ಲಿ ಭಾರತ ನಿರ್ಮಾಣ ವಿವಿಧ ಯೋಜನೆಗಳ ಕುರಿತು ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಸಹಕರಿಸಿ: ನಿರ್ಮಲ ಭಾರತ ಅಭಿಯಾನದಡಿ ಪ್ರತಿಯೊಂದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಪಂ.ಗಳ ವತಿಯಿಂದ 9,200 ಸಹಾಯಧನ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದು ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪಿಡಿಒ ಮಲ್ಲಿನಾಥ ದಂಡೋತಿ ಮಾತನಾಡಿ, ಸರ್ಕಾರ ಗ್ರಾಮೀಣ ಹಾಗೂ ನಗರ ಜೀವನ ಮಟ್ಟದ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಮೀಣ ಜನತೆಯು ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಜೋಷಿ ಮಾತನಾಡಿದರು. ಅಧ್ಯಕ್ಷತೆಯನ್ನು ತಾಪಂ ಸದಸ್ಯ ಕಮಲಾಬಾಯಿ ದೇವೇಂದ್ರ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯ ನಾಗೇಂದ್ರಪ್ಪ ಪಾಟೀಲ, ಕಾಶಿನಾಥ ರೋಣಿ, ಸುನಿಲ ಚನ್ನಮಣಿ ಇತರರು ಇದ್ದರು. ಎನ್.ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ ವಂದಿಸಿದರು.