ರೇಲ್ವೆ ಬಜೆಟ್- ರಾಜ್ಯಕ್ಕೆ ಬಂಪರ್ ಕೊಡುಗೆ: ಸಚಿವ
ಸೈದಾಪುರ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರೇಲ್ವೆ ಬಜೆಟ್ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಸಚಿವ ಬಾಬುರಾವ ಚಿಂಚನಸೂರ ಹೇಳಿದ್ದಾರೆ.
ಸೈದಾಪುರ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕರ್ನಾಟಕ ರಾಜ್ಯಕ್ಕೆ ಹೊಸ ರೈಲುಗಳು ಹಾಗೂ ರೇಲ್ವೆ ಮಾರ್ಗಗಳನ್ನು ಪ್ರಾರಂಭಿಸಲು ಖರ್ಗೆ ಪ್ರಯತ್ನಿಸಿದ್ದಾರೆ. ಇದರಿಂದ ರಾಜ್ಯದ ಜನತೆಗೆ ಹೆಚ್ಚು ಅನುಕೂಲವಾಗಿದೆ. ಇದುವರೆಗೂ ಕಾಣದ ಹಲವು ಸೌಲಭ್ಯಗಳನ್ನು ಪ್ರಯಾಣಿಕರು ಕಾಣುವಂತಾಗಿದೆ ಎಂದು ಹೇಳಿದರು.
ಅದರಲ್ಲಿಯೂ ನನ್ನ ಮತಕ್ಷೇತ್ರ ಹಾಗೂ ಜಿಲ್ಲೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಬಹುದಿನದ ಬೇಡಿಕೆಯಾದ, ನೆರೆಯ ಆಂಧ್ರಪ್ರದೇಶಕ್ಕೆ ಸೇರಿದ ನಾರಾಯಣಪೇಟ್ ರೋಡ್ ಅನ್ನು ಸೈದಾಪುರವೆಂದು ಮರು ನಾಮಕರಣ ಮಾಡಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯವಾಗಿದೆ. ಅದಕ್ಕಾಗಿ ಖರ್ಗೆಯವರೇ ಸಚಿವರಾಗಿ ಬರಬೇಕಾಯಿತು ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರ ಹಾಗೂ ಗಡಿಭಾಗದ ಜನತೆಯ ಭಾವನಾತ್ಮಕ ವಿಷಯಕ್ಕೆ ಸ್ಪಂದಿಸಿದ್ದಾರೆ. ಅವರ ಈ ಕಾರ್ಯಕ್ಕೆ ಹೆಮ್ಮೆಪಡುವಂತಾಗಿದೆ ಎಂದರು. ಹಿಂದುಳಿದ ಜಿಲ್ಲೆ ಎಂದು ಗುರುತಿಸುವ ಯಾದಗಿರಿಯ ಗಡಿ ಭಾಗದಲ್ಲಿ ರೇಲ್ವೆ ಬೋಗಿಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಇದು ಅವರ ಮಹತ್ವದ ಸಾಧನೆಯಾಗಿದೆ. ಕೇಂದ್ರ ಸರ್ಕಾರದಲ್ಲಿನ ಅತಿ ಅನುಭವಿ ಹಾಗೂ ಜನಪರವಾದ ಮಂತ್ರಿ ಇವರಾಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿ ಕಾರ್ಯನಿರ್ವಹಿಸಿರುವುದರಿಂದ ಜನಪರವಾದ ಬಜೆಟ್ ನೀಡಿದ್ದಾರೆ ಎಂದು ಚಿಂಚನಸೂರ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಸ್ತು ಸಂಗ್ರಹಾಲಯ ಸ್ಥಾಪನೆಗೆ ಒತ್ತಾಯ
ಕೆಂಭಾವಿ: ಯಾದಗಿರಿ ಜಿಲ್ಲೆ ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ತನ್ನ ಪುಟ್ಟ ಒಡಲಲ್ಲಿ ಅನೇಕ ಇತಿಹಾಸ ಕುರುಹುಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಅನೇಕ ಇತಿಹಾಸಗಳು, ಶಿಲಾಶಾಸನಗಳು, ಶಿಲ್ಪಗಳು, ವೀರಗಲ್ಲುಗಳು ಇದ್ದು ಅದನ್ನು ಸಂರಕ್ಷಿಸಲು ಸರ್ಕಾರ ಜಿಲ್ಲೆಯಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂದು ಇತಿಹಾಸಕಾರ, ಸಂಶೋಧಕ ನಿಂಗನಗೌಡ ದೇಸಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಾತನಾಡಿ, ಈ ಭಾಗದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಿದರೆ ಇಲ್ಲಿ ಆಳಿಹೋದ ಅನೇಕ ಇತಿಹಾಸಕಾರರ ನೆನಪು ಉಳಿಯುತ್ತದೆ ಮತ್ತು ಕೆಂಭಾವಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇತಿಹಾಸ ಸಾರುವ ಶಿಲಾಶಾಸನಗಳಿದ್ದು, ಅವುಗಳನ್ನು ಸಂರಕ್ಷಿಸಬೇಕೆಂದು ಕೋರಿದ್ದಾರೆ.