ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೇ.33ರಷ್ಟು ಒಳಚರಂಡಿ ನಿರ್ಮಾಣಕ್ಕೆ ಮೂರೂವರೆ ದಶಕ!

Rashmi Kasaragodu
Updated On : 14 Feb 2014, 11:50 am

ಕ.ಪ್ರ. ವಾರ್ತೆ    ಗುಲ್ಬರ್ಗ    ಫೆ.13
ಪ್ರಶ್ನೆ- ಗುಲ್ಬರ್ಗ ಮಹಾನಗರದ ಒಟ್ಟು 800 ಕಿಮೀ ಒಳಚರಂಡಿ ಮಾರ್ಗ ನಿಮಾರ್ಣದ ಪೈಕಿ ಶೇ.33 ರಷ್ಟು ಒಳಚರಂಡಿ ನಿರ್ಮಾಣಕ್ಕೆ (250 ಕಿಮೀ ಚರಂಡಿ ಕಾಮಗಾರಿ) ತಗುಲಿದ್ದ ಅವಧಿ ಎಷ್ಟು?
ಉತ್ತರ- ಬರೋಬ್ಬರಿ 35 ವರ್ಷ.
ಪ್ರಶ್ನೆ- 250 ಕಿಮೀ ಚರಂಡಿ ನಿರ್ಮಾಣಕ್ಕೆ ವೆಚ್ಚವಾದ ಹಣ ಎಷ್ಟು?
ಉತ್ತರ- 42 ಕೋಟಿಗೂ ಅಧಿಕ.
ಪ್ರಶ್ನೆ- ನಿರ್ಮಾಣಗೊಂಡ 250 ಕಿಮೀ ಚರಂಡಿ ಕಾಮಗಾರಿ ಈಗ ಯಾವ ಸ್ಥಿತಿಯಲ್ಲಿದೆ?
ಉತ್ತರ- ಅಧೋಗತಿ ತಲುಪಿದೆ.
ಇದನ್ನು ನೀವೇನಾದರೂ ರಸಪ್ರಶ್ನೆ ಅಂದುಕೊಂಡೀರಿ, ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಅಮರನಾಥ ಪಾಟೀಲ್, ನಗರಾಭಿವೃದ್ಧಿ ಮಂತ್ರಿ ವಿನಯ ಕುಮಾರ್ ಸೊರಕೆ ನಡುವಿನ ಪ್ರಶ್ನೋತ್ತರದ ಝಲಕ್ ಇದು.
ಬಹುಕೋಟಿ ಹಣ ಚರಂಡಿಯಲ್ಲೇ....: ಈಶಾನ್ಯ ಭಾಗದ ಪದವೀಧರ ಕ್ಷೇತ್ರದ ಮೇಲ್ಮನೆ ಸದಸ್ಯ ಅಮರನಾಥ ಪಾಟೀಲ್ ಗುಲ್ಬರ್ಗ ಮಹಾನಗರದ ಒಳ ಚರಂಡಿ ವ್ಯವಸ್ಥೆ ಕುರಿತಂತೆ ಕೇಳಿದ್ದ ಪ್ರಶ್ನೆಗಳಿಗೆ ರಾಜ್ಯದ ನಗರಾಭಿವೃದ್ಧಿ ಖಾತೆ ಸಚಿವ ವಿನಯಕುಮಾರ್ ಸೊರಕೆ ನೀಡಿರುವ ಲಿಖಿತ ಉತ್ತರ, ಸದನದಲ್ಲಿ ನಡೆದಂತಹ ಚರ್ಚೆಗಳ ಮೇಲೋಮ್ಮೆ ಕಣ್ಣಾಡಿಸಿದವರು ಗಾಬರಿ ಆಗಲೇಬೇಕು. ಏಕೆಂದರೆ ನೀರಿನಂತೆ ಬಹುಕೋಟಿ ಹಣ ಚರಂಡಿಯಲ್ಲೇ ವೆಚ್ಚವಾದರೂ ಇಂದಿಗೂ ನಗರ ಒಳಚರಂಡಿ ಸೌಕರ್ಯ ಹಸನಾಗಿಲ್ಲ.
ಈ ಮಾತನ್ನು ಖುದ್ದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರೇ ಒಪ್ಪಿಕೊಂಡಿದ್ದಾರೆ.
ಒಳಚರಂಡಿ ಅಗತ್ಯ: ಗುಲ್ಬರ್ಗ ನಗರದ ಈಗಿನ ಜನಸಂಖ್ಯೆ 6.50 ಲಕ್ಷ. ಈ ಜನವಸತಿಗೆ ತಕ್ಕಂತೆ 750 ರಿಂದ 800 ಕಿಮೀ ವರರೆಗೂ ಒಳಚರಂಡಿ ನಿರ್ಮಿಸುವುದು ತುರ್ತು ಅಗತ್ಯ. ಆದರೆ ಕಳೆದ 70ರ ದಶಕದಿಂದಲೂ ಇಲ್ಲಿ ಚರಂಡಿ ನಿರ್ಮಾಣ ಹಂತಹಂತವಾಗಿ ಶುರುವಾಗಿದ್ದು, ಬಹುಕೋಟಿ ರುಪಾಯಿ ಖರ್ಚಾಗಿದೆ. ಆದರೆ ನಿರ್ಮಾಣಗೊಂಡ ಚರಂಡಿ ಮಾತ್ರ ಲೆಕ್ಕಕ್ಕುಂಟು, ಜನರ ನೆರವಿಗಿಲ್ಲ.
1) 1977- 79 ರ ಮೊದಲ ಹಂತ ಚರಂಡಿ ನಿರ್ಮಾಣ ಯೋಜನೆ- 1 ಕೋಟಿ
2) 1990- 91- ಎರಡನೇ ಹಂತದ ಚರಂಡಿ ನಿರ್ಮಾಣ ಯೋಜನೆ- 17.73 ಕೋಟಿ
3) 2001- 02 3ನೇ ಹಂತದ ಚರಂಡಿ ನಿರ್ಮಾಣ ಯೋಜನೆ- 22.23 ಕೋಟಿ
ಹೆಚ್ಚು- ಕಮ್ಮಿ 40 ಕೋಟಿ ಹಣ ಚರಂಡಿ ನಿರ್ಮಾಣಕ್ಕೆ ಬಳಸಲಾಗಿದೆಯಾದರೂ ಜನರ ನಿರೀಕ್ಷೆಗೆ ತಕ್ಕಂತೆ ಯೋಜನೆ ಇಲ್ಲಿ ಮೈದಳೆಯದೆ ಹೋಗಿದ್ದು ದುರಂತ. ಇಂದಿಗೂ ನಗರದ ಯಾವ ಬಡಾವಣೆಯಲ್ಲಿಯೂ ಪಕ್ಕಾ ಒಳ ಚರಂಡಿ ವ್ಯವಸ್ಥೆ ಇಲ್ಲ. ಮ್ಯಾನ್ ಹೋಲ್ ತೆರೆದುಕೊಂಡು ತೊಂದರೆ ಅನುಭವಿಸುವ ಜನತೆಗೆ ಇಲ್ಲಿ ಕಮ್ಮಿ ಏನಿಲ್ಲ.
ಮತ್ತೆ ಕೋಟಿ ಕೋಟಿ ಅನುದಾನ: ಎಂಎಲ್ಸಿ ಅಮರನಾಥ ಪಾಟೀಲ್ ಪ್ರಶ್ನೆಗೆ ಉತ್ತರಿಸಿರುವ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆಯವರು 750 ಕಿಮೀ ಒಳ ಚರಂಡಿ ನಿರ್ಮಾಣಕ್ಕೆ 510 ಕೋಟಿ ಹಣಕಾಸಿನ ಅಗತ್ಯವಿದೆ. ಏಷಿಯನ್ ಅಭಿವೃದ್ಧಿ ಬ್ಯಾಂಕಿನಿಂದ ಈಗಾಗಲೇ 60 ಕೋಟಿ ಹಣಕಾಸು ಬಂದಿದೆ. ಅದೇ ರೀತಿ ಇದೇ ಬ್ಯಾಂಕಿನವರು 2ನೇ ಹಂತವಾಗಿ 99 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. 750 ಕಿಮೀ ಚರಂಡಿ ಗುಲ್ಬರ್ಗದಲ್ಲಿ ನಿರ್ಮಿಸಲು ಇನ್ನೂ 350 ಕೋಟಿ ಹಣಕಾಸು ಬೇಕು. ಇಷ್ಟೊಂದು ಅನುದಾನ ವ್ಯವಸ್ಥೆ ಮಾಡಿಯೇ ಯೋಜನೆ ಹಾಕಿಕೊಳ್ಳಬೇಕಾಗಿದೆ ಎಂದು ವಿನಯ ಕುಮಾರ್ ಹೇಳಿದ್ದಾರೆ.


ಕೊಚ್ಚಿ ಹೋಗುತಿದೆ ಅನುದಾನ...


ಗುಲ್ಬರ್ಗ ಮಹಾನಗರದಲ್ಲಿ ಕಳೆದ 35 ವರ್ಷಗಳಿಂದ ಚರಂಡಿಗೆಂದು ಕೋಟಿಗಟ್ಟಲೇ ಅನುದಾನ ಬಂದಿದೆ. ಖರ್ಚೂ ಆಗಿದೆ. ಆದರೆ ಇಂದಿಗೂ ಉತ್ತಮ ಸೌಕರ್ಯ ಜನತೆಗೆ ದೊರಕಿಲ್ಲ. ಇದರ ಅರ್ಥವೆಂದರೆ ಅನುದಾನ ಸರಿಯಾಗಿ ಬಳಕೆಯಾಗಿಲ್ಲ, ಚರಂಡಿಯಲ್ಲೇ ಹಣ ಪೋಲಾಗುತ್ತಿರುವುದು ಸ್ಪಷ್ಟ. ವೈಜ್ಞಾನಿಕವಾಗಿ ಹಾಗೂ ಜನಪರವಾದಂತಹ ಯೋಜನೆ ರೂಪಿಸುವವರ ಕೊರತೆಯೇ ಇದಕ್ಕೆ ಕಾರಣ. ಹಣ ಒದಗಿಸುವುದು ಮುಖ್ಯವಲ್ಲ, ಲಭ್ಯ ಹಣದ ಸದ್ವಿನಿಯೋಗ ಮುಖ್ಯ.
 ಅಮರನಾಥ ಪಾಟೀಲ್, ಎಂಎಲ್ಸಿ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement