ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲೆಗೆ ಸಿಹಿ- ಕಹಿಯ ಸಂಗಮ

Vishwanath S
Updated On : 15 Feb 2014, 1:18 am

ಕ.ಪ್ರ. ವಾರ್ತೆ , ಗುಲ್ಬರ್ಗ , ಫೆ.14
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2014- 15ನೇ ಸಾಲಿನ ಆಯವ್ಯಯ ಗುಲ್ಬರ್ಗ ಪಾಲಿಗೆ ಖುಷಿ- ನಿರಾಶೆಗಳ ಮಿಶ್ರಣ.
ಆರೋಗ್ಯ ಮೂಲ ಸೌಕರ್ಯಗಳಿಗೆ ಬರ ಕಾಡುತ್ತಿದ್ದ ಈ ಜಿಲ್ಲೆಯಲ್ಲಿ ಸರ್ಕಾರದಿಂದಲೇ ಬರುವ ದಿನಗಳಲ್ಲಿ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಸಿದ್ದರಾಮಯ್ಯ ಈ ಬಜೆಟ್‌ನಲ್ಲಿ ಘೋಷಿಸುವ ಮೂಲಕ ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.
ಆದರೆ ತೊಗರಿ ಕಣಜ ಎಂದೇ ಹೆಸರಾಗಿರುವ ಈ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ತಣ್ಣಗೆ ಮಲಗಿರುವ ತೊಗರಿ ಅಭಿವೃದ್ಧಿ ಮಂಡಳಿಗೆ ಬಲ- ಬೆಂಬಲ ನೀಡುವ ಕೆಲಸವಾಗಬೇಕು ಎಂಬ ಈ ಭಾಗದ ತೊಗರಿ ರೈತರು, ವರ್ತಕರ ಬೇಡಿಕೆ ಮಾತ್ರ ಹಾಗೇ ಉಳಿಯಿತು. ಅಲ್ಲದೆ ಕಳೆದೊಂದು ದಶಕದಿಂದ ಅರ್ಧಂಬರ್ಧ ಕಾಮಗಾರಿಯಾಗಿ ಉಳಿದುಕೊಂಡಿರುವ ವಿಮಾನ ನಿಲ್ದಾಣ ಕಾಮಗಾರಿ ಅದ್ಯಾವಾಗ ಮುಗಿಸಲಾಗುತ್ತದೆ ಎಂಬ ಬಗ್ಗೆಯೂ ಈ ಬಜೆಟ್‌ನಲ್ಲಿ ಯಾವುದೇ ಸಂಗತಿ ಪ್ರಸ್ತಾಪಿಸಿಲ್ಲ.
ಚಕಾರವಿಲ್ಲ: ಇದಲ್ಲದೆ ಡಾ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ 114 ತಾಲೂಕುಗಳಲ್ಲಿ ಪ್ರಗತಿ ಕಾಮಗಾರಿಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಂತೆ ರು. 2,259 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಯೋಜನೆಯಡಿಯಲ್ಲಿ ಏನೆಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದರ ಅಧ್ಯಯನಕ್ಕೆ ಚಾಲನೆ ನೀಡಿದ್ದಾರೆ. ಆ ಮೂಲಕ ಪ್ರಾದೇಶಿಕ ಸಮತೋಲನ ಹೊಡೆದೋಡಿಸಲು ವೈಜ್ಞಾನಿಕ ತಳಹದಿ ಯೋಜನೆಗಳು ಇರಲೇಬೇಕು ಎಂಬ ತಮ್ಮ ಸಾರ್ಕರದ ಕಾಳಜಿ ಎತ್ತಿ ತೋರಿಸಿದ್ದಾರೆ. ತೊಗರಿ ಅಭಿವೃದ್ಧಿ ಮಂಡಳಿ ಮಾತಿಲ್ಲ ಯಾಕೆ?
ತೊಗರಿಗೆ ಸ್ಪಂದಿಸಲಿಲ್ಲ: 4.50 ಲಕ್ಷ ಹೆಕ್ಟರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬೆಳೆಯುವ ನಾಡು ಗುಲ್ಬರ್ಗ. ತೊಗರಿ ಮಂಡಲಿಗೆ ಕಾಯಕಲ್ಪ ಬೇಕು ಎಂಬ ಆಗ್ರಹಕ್ಕೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸ್ಪಂದನೆ ದೊರಕಿಲ್ಲ.
ದಾಲ್ ಮಿಲ್ ಹೆಚ್ಚಿರುವ ಹಾಗೂ ಲಕ್ಷಾಂತರ ಹೆಕ್ಟರ್‌ಗೂ ಹೆಚ್ಚು ಪ್ರಮಾಣದಲ್ಲಿ ತೊಗರಿ ಬೆಳೆಯುವ ಈ ನಾಡಿನಲ್ಲಿ ತೂರ್ ಪಾರ್ಕ್ ಸ್ಥಾಪನೆಯ ಬೇಡಿಕೆ ರೈತರದ್ದಾಗಿದೆ. ಆದರೆ ತೊಗರಿ ಪಾರ್ಕ್ ಅಭಿವೃದ್ಧಿ, ತೊಗರಿ ಮಂಡಳಿ ಅಭಿವೃದ್ಧಿ, ಅದನ್ನು ಹೆಚ್ಚು ಬಲಗೊಳಿಸುವ ವಿಚಾರದಲ್ಲಿಯೂ ಬಜೆಟ್‌ನಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ.
ಸೌರಶಕ್ತಿ ಬಳಕೆಗೂ ಯೋಜನೆ ಇಲ್ಲ: ಗುಲ್ಬರ್ಗ ಪ್ರಖರ ಬಿಸಿಲ ನಾಡು. ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಯಲ್ಲಿ ಈ ಪ್ರದೇಶದಲ್ಲಿ ಸೌರಶಕ್ತಿ ಪ್ರಗತಿಗೂ ಹೆಚ್ಚಿನ ಯೋಜನೆಗಳನ್ನು, ಸವಲತ್ತುಗಳನ್ನು, ರಿಯಾಯ್ತಿಗಳನ್ನು ಸರ್ಕಾರ ಘೋಷಿಸವ ನಿರೀಕ್ಷೆ ಇಲ್ಲಿನ ಜನತೆ, ರೈತರದ್ದಾಗಿತ್ತು. ಈ ಸಂಗತಿಯೂ ಬಜೆಟ್‌ನಲ್ಲಿ ಸ್ಥಾನ ಪಡೆದಿಲ್ಲ.
ಕ್ಯಾನ್ಸರ್ ಆಸ್ಪತ್ರೆ ಕನಸು: ಇಲ್ಲಿನ ಪೆರಿಫೇರಲ್ ಕ್ಯಾನ್ಸರ್ ಆಸ್ಪತ್ರೆ ಕೆಲಸ ನಿಲ್ಲಿಸಿ ವರ್ಷಗಳೇ ಉರುಳಿವೆ. ಇಲ್ಲಿನವರೇ ಆಗಿರುವ ಡಾ. ಶರಣಪ್ರಕಾಶ ಪಾಟೀಲ್ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು. ಜನತೆ ಕ್ಯಾನ್ಸರ್ ಆಸ್ಪತ್ರೆಗೆ ಬಜೆಟ್ ಕಾಯಕಲ್ಪ ನೀಡುತ್ತದೇ ಎಂದೇ ನಂಬಿದ್ದರು. ಬೆಂಗಳೂರಿನ ಒಂದು ಕ್ಯಾನ್ಸರ್ ಆಸ್ಪತ್ರೆಗೆ 10 ಕೋಟಿ ಮಂಜೂರು ಮಾಡಿರುವ ಸರ್ಕಾರ ಹಿಂದುಳಿದ ಗುಲ್ಬರ್ಗದ ಕ್ಯಾನ್ಸರ್ ಆಸ್ಪತ್ರೆಯನ್ನೇ ಮರೆತುಬಿಟ್ಟಿದೆ. ಇಲ್ಲಿ ಆರಂಭವಾಗಿರುವ ಕೃಷಿ ಕಾಲೇಜು ಇನ್ನೂ ಸೌಕರ್ಯ ವಂಚಿತವಾಗಿದೆ, ಈ ಕಾಲೇಜಿಗೆ ಅನುದಾನ ಹರಿದು ಬರುತ್ತದೆ ಎಂದೇ ಕೃಷಿ ಶಿಕ್ಷಣಾಸಕ್ತರು ನಿರೀಕ್ಷಿಸಿದ್ದರು. ಈ ಸಂಗತಿಯೂ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.
ಗುಲ್ಬರ್ಗ ವಿಮಾನ ನಿಲ್ದಾಣ- ಸರ್ಕಾರ ಮೌನ: ಅರ್ಧಂಬರ್ಧ ಕಾಮಗಾರಿಯೊಂದಿಗೆ ಗುತ್ತಿಗೆದಾರ ಕಂಪನಿಗಳ ಒಳ ಜಗಳದಿಂದ ಸ್ಮಾರಕವಾಗಿ ನಿಂತಿರುವ ಇಲ್ಲಿನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ವಿಮಾನಯಾನ ಸೇವೆ ಗುಲ್ಬರ್ಗದಿಂದ ಆರಂಭವಾಗೋದು ಯಾವಾಗ ಎಂಬ ಜನರ ಪ್ರಶ್ನೆಗೆ ಸಿದ್ದರಾಮಯ್ಯ ಈ ಬಜೆಟ್‌ನಲ್ಲಿ ಯಾವುದೇ ಉತ್ತರ ನೀಡುವ ಗೋಜಿಗೆ ಹೋಗಿಲ್ಲ.
ಯೋಜನೆಯ ಗುತ್ತಿಗೆ ಕಂಪನಿ ರಾಹಿ ಹಾಗೂ ಪಾಲುದಾರ ಕಂಪನಿಗಳ ನಡುವೆ ಕಾನೂನು ಸಮರ ಶುರರುವಾಗಿದ್ದರಿಂದ ಗುಲ್ಬರ್ಗ ವಿಮಾನ ನಿಲ್ದಾಣ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ರನ್‌ವೇನಲ್ಲೇ ಕಾಮಗಾರಿ ನಿಲ್ಲಿಸಿರುವ ಗುತ್ತಿಗೆ ಕಂಪನಿಯವರು ಈಗಾಗಲೇ ಇಲ್ಲಿಂದ ತಮ್ಮೆಲ್ಲ ಸರಕುಗಳನ್ನು ಸಾಗಿಸುತ್ತಿರುವಾಗ ರಾಜ್ಯ ಸರ್ಕಾರ ಗುತ್ತಿಗೆ ಕಂಪನಿಯ ಜಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಬಜೆಟ್‌ನಲ್ಲಿ ಹೇಳಿಕೆ ನೀಡಲೇಬೇಕು ಎಂಬಂತೆ  ವಿಮಾನ ನಿಲ್ದಾಣ ಇದೇ ವರ್ಷ ಪೂರ್ಣ ಎಂದಿರುವುದು ಜನರ ಟೀಕೆಗೆ ಗುರಿಯಾಗಿದೆ.
ಪೊಲೀಸ್ ಕಮಿಷ್ನರೇಟ್ ಎಲ್ಲಿ?: ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಪೊಲೀಸ್ ಕಮಿಷ್ನರೇಟ್ ಕಚೇರಿಗಳು ಸ್ಥಾಪನೆಯಾಗಿವೆ. ಆದರೆ ಕಂದಾಯ ವಿಭಾಗವಾಗಿರುವ ಗುಲ್ಬರ್ಗದಲ್ಲಿ ಮಾತ್ರ ಈ ಮಾನದಂಡ ಇಂದಿಗೂ ಅನ್ವಯವಾಗಿಲ್ಲ. ಯಾಕೋ ಗೊತ್ತಿಲ್ಲ. ಇಲ್ಲಿನ ಜನತೆ ಪೊಲೀಸ್ ಕಮಿಷ್ನರೇಟ್ ಬೇಕು ಎಂದು ಆಗ್ರಹಿಸುತ್ತಿದ್ದರೂ, ಇಂದಿಗೂ ಆ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಗುಲ್ಬರ್ಗ ಬಿ ದರ್ಜೆ ನಗರವಾಗಿ ಘೋಷಣೆಯಾಗಬೇಕಿತ್ತು. ಇದಕ್ಕಾಗಿ ಸರ್ಕಾರಿ ನೌಕರರ ಸಂಘಟನೆ ಸೇರಿದಂತೆ ಸಂಘಟನೆಗಳು ಹೋರಾಟ ಮಾಡುತ್ತಲೇ ಇವೆ. ಅನೇಕ ಭಾರಿ ಬೇಡಿಕೆ ಸಲ್ಲಿಸಿ ಆಗ್ರಹಿಸಲಾಗಿದ್ದರೂ ಮರೀಚಿಕೆಯಾಗಿದೆ.
ಬಿ ದರ್ಜೆ ಪಟ್ಟವೂ ಇಲ್ಲ
ಜನಸಂಖ್ಯೆ ಆದಾರದಲ್ಲಿ ಗುಲ್ಬರ್ಗ ಬಿ ದರ್ಜೆ ನಗರವಾಗಿ ಘೋಷಣೆಯಾಗಬೇಕಿತ್ತು. ಇದಕ್ಕಾಗಿ ಸರ್ಕಾರಿ ನೌಕರರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಹೋರಾಟ ಮಾಡುತ್ತಲೇ ಇವೆ. ಸರ್ಕಾರಕ್ಕೆ ಅನೇಕ ಬಾರಿ ಬೇಡಿಕೆ ಸಲ್ಲಿಸಿ ಆಗ್ರಹಿಸಲಾಗಿದ್ದರೂ, ಈ ದರ್ಜೆ ಗುಲ್ಬರ್ಗಕ್ಕೆ ಮರೀಚಿಕೆಯಾಗಿದೆ. ಈ ಬಜೆಟ್ಟಿನಲ್ಲಿಯೂ ಬಿ ದರ್ಜೆ ಪಟ್ಟ ನಗರಕ್ಕೆ ಕೈತಪ್ಪಿದೆ. ಬಿ ದರ್ಜೆ ನಗರವಾದಲ್ಲಿ ಸರ್ಕಾರಿ ನೌಕರರಿಗೆ ಅನೇಕ ಸವಲತ್ತುಗಳು ಹೆಚ್ಚುವುದಲ್ಲದೆ ಈ ನಗರಕ್ಕೆಂದೇ ಕೆಲವು ಯೋಜನೆಗಳು, ಕೇಂದ್ರದ ಅನುದಾನ ಹರಿದು ಬರುವುದು.
ಹೈ-ಕ ಅಭಿವೃದ್ಧಿ ಮಂಡಳಿಗೆ 1037 ಕೋಟಿ ಅನುದಾನಹೈದರಾಬಾದ್- ಕರ್ನಾಟಕ ಪ್ರದೇಶದ ಜನರಿಗೆ ಮುಂಗಡಪತ್ರದಲ್ಲಿ ಸಂತಸದ ಸುದ್ದಿಯಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮಂಡಳಿಯೊಂದನ್ನು ರಚಿಸಲಾಗುತ್ತದೆ. ಮಾತ್ರವಲ್ಲದೆ ವಿಶೇಷ ಅಭಿವೃದ್ಧಿ ಕಾಮಗಾರಿಗಾಗಿ 1037 ಕೋಟಿ ಒದಗಿಸಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಈ ಪ್ರದೇಶವನ್ನು ಸಂವಿಧಾನದ ಅನುಚ್ಛೇದ 371(ಜೆ)ರಲ್ಲಿ ವಿಶೇಷ ಸ್ಥಾನಮಾನ ನೀಡಿದೆ. ಈ ಪ್ರದೇಶದ ಅಭಿವೃದ್ಧಿಗಾಗಿ ಹೊಸ ಮಂಡಳಿಗೆ ರು. 600 ಕೋಟಿ ನಿಗದಿಪಡಿಸಲಾಗಿದೆ.
* ಕೇಂದ್ರ ಸರ್ಕಾರ ಲೋಕಪಾಲ್ ಅಧಿನಿಯಮ- 2013ನ್ನು ಜಾರಿಗೊಳಿಸಿರುವ ಮಾದರಿಯಲ್ಲಿ ಕರ್ನಾಟಕದಲ್ಲಿ ಹೊಸ ಕಾಯ್ದೆ.
* ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಗಳಲ್ಲಿ ಸುಧಾರಣೆ ತರಲು ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಪಿ.ಸಿ. ಹೋಟಾ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ಬಹುತೇಕ ಶಿಫಾರಸುಗಳಿಗೆ ಸರ್ಕಾರದ ಒಪ್ಪಿಗೆ. ಅವುಗಳ ಅನುಷ್ಠಾನಕ್ಕೆ ಸಕಾರಾತ್ಮಕ ಕ್ರಮ.
* ಹಾಲಿ ಇರುವ ವೈದ್ಯಕೀಯ ವೆಚ್ಚ ಮರುಪಾವತಿ ನಿಯಮಗಳನುಸಾರ ಸರ್ಕಾರಿ ನೌಕರರು ವೆಚ್ಚ ಮರು ಪಾವತಿ ತೊಂದರೆ ಪರಿಹರಿಸುವ ದೃಷ್ಟಿಯಿಂದ ಪ್ರಾಯೋಗಿಕವಾಗಿ 7 ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಮಾತ್ರ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಒದಗಿಸಲು 'ಜ್ಯೋತಿ ಸಂಜೀವಿನಿ' ಎಂಬ ನೂತನ ಯೋಜನೆ.
* ಸರ್ಕಾರದಲ್ಲಿ ಪಾರದರ್ಶಕತೆ ಮತ್ತು ಸರಳೀಕರಣ ಸಾಧಿಸಲು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ.
ಗೌರವಧನ ಹೆಚ್ಚಳ
ಸ್ವಾತಂತ್ರ್ಯ ಯೋಧರಿಗೆ ನೀಡಲಾಗುತ್ತಿರುವ ರಾಜ್ಯ ಗೌರವಧನ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ. ಹಾಗೂ ಗೋವಾ ವಿಮೋಚನಾ ಚಳವಳಿಗಾರರಿಗೆ ನೀಡುತ್ತಿರುವ ಮಾಸಿಕ ಗೌರವಧನ 2 ಸಾವಿರದಿಂದ 3 ಸಾವಿರಕ್ಕೆ ಹೆಚ್ಚಳ.
ಖುಷಿ ಸಂಗತಿಗಳು
* ಡಾ. ನಂಜುಂಡಪ್ಪ ಸಮಿತಿ ವರದಿಯಂತೆ ಹಂದುಳಿದ ತಾಲೂಕುಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗಾಗಿ 2,250 ಕೋಟಿ ಅನುದಾನ
* ಗುಲ್ಬರ್ಗದಲ್ಲಿ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
* ಗುಲ್ಬರ್ಗದಲ್ಲಿ ಹಜ್ ಭವನ
* ಗುಲ್ಬರ್ಗದಲ್ಲಿ ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ನೇಹ ಶಿಬಿರ ಯೋಜನೆ ಅನುಷ್ಠಾನ
* ಸಾರಿಗೆ ಇಲಾಖೆಯಿಂದ ಗುಲ್ಬರ್ಗದಲ್ಲಿ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರ ಸ್ಥಾಪನೆ
* ಚಿಂಚೋಳಿ ವನ್ಯಧಾಮ ಅಭಿವೃದ್ಧಿಗೆ ಒತ್ತು
* ಗುಲ್ಬರ್ಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಟ್ರಾಮಾ ಸೆಂಟರ್ ಮಂಜೂರು
* ಗುಲ್ಬರ್ಗದಲ್ಲಿರುವ ಹೌಸಿಂಗ್ ಬೋರ್ಡ್ ವಸತಿ ಸಮುಚ್ಚಯಗಳಲ್ಲಿ ಬಹುಮಹಡಿ ಕಟ್ಟಡಗಳು (ವಾಣಿಜ್ಯ- ವಸತಿ)
* ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ಖರ್ಚು- ವೆಚ್ಚ, ಕಾಮಗಾರಿ ಅಧ್ಯಯನಕ್ಕೆ ಧಾರವಾಡದ ಸಿಎಂಡಿಆರ್ ಸಂಸ್ಥೆ ನಿಯೋಜನೆ
* ಸಾರಿಗೆ ಇಲಾಖೆಯಡಿಯಲ್ಲಿ ಭಾರಿ ವಾಹನ ಚಾಲನಾ ತರಬೇತಿ ಸಂಸ್ಥೆ ಸ್ಥಾಪನೆ
* ಪೊಲೀಸ್ ಪಬ್ಲಿಕ್ ಸ್ಕೂಲ್ ಸ್ಥಾಪನೆ
ನಿರಾಶೆ ಸಂಗತಿಗಳು
* ಗುಲ್ಬರ್ಗದಲ್ಲಿರುವ ತೊಗರಿ ಅಭಿವೃದ್ಧಿ ಮಂಡಳಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದೆ ಹೋಗಿದು.್ದ
* ತೊಗರಿ ಮಂಡಳಿಗೆ ಬೆಂಬಲಿಸುವ ಯಾವ ಯೋಜನೆಗಳೂ ಸಿದ್ದರಾಮಯ್ಯ ಘೋಷಣೆ ಮಾಡಿಲ್ಲ
* ಗುಲ್ಬರ್ಗದಲ್ಲಿ ಕೃಷಿ ಆಧಾರಿತ ವಹಿವಾಟು ಕೇಂದ್ರ ಸ್ಥಾಪನೆ ಬಗ್ಗೆ ಯಾವುದೇ ಚಕಾರ ಬಜೆಟ್‌ನಲ್ಲಿ ಇಲ್ಲ
* ಗುಲ್ಬರ್ಗ ಸೇರಿದಂತೆ ಹೈ- ಕ ಭಾಗದಲ್ಲಿ ಸಮಗ್ರ ಕೈಗಾರಿಕಾ ನೀತಿ ಅನ್ವಯಿಸುವ ಬಗ್ಗೆಯೂ ಸರ್ಕಾರ ನೀತಿ ರೂಪಿಸಿಲ್ಲ
* ಗುಲ್ಬರ್ಗದಲ್ಲೊಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಂಡಿಲ್ಲ.
* ಗುಲ್ಬರ್ಗ ಕೃಷಿ ಕಾಲೇಜಿಗೆ ಮೂಲ ಸೌಕರ್ಯ ನೀಡಲು ಯಾವುದೇ ಯೋಜನೆಗಳಿಲ್ಲ
* ಗುಲ್ಬರ್ಗ ಭಾಗದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಪೂರ್ಣಗೊಳ್ಳಿಸಲು ಅನುದಾನ ಮೀಸಲಾಗಿಲ್ಲ


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement