ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯ
ಗುರುಮಠಕಲ್: ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ಇದರಿಂದ ಶಾಂತಿ ಮತ್ತು ಕೂಡಿ ಬಾಳಲು ಸಾಧ್ಯವಾಗುವ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಅವರು ಪಟ್ಟಣದ ಖಾಸಾಮಠ ಅವರಣದಲ್ಲಿ ಶುಕ್ರವಾರ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಅರಿವು ಅಭಿಯಾನದಿಂದ ಗ್ರಾಮಾಂತರ ಪ್ರದೇಶದ ಜನರಿಗೆ ಕಾನೂನಿನ ಸೌಲಭ್ಯಗಳ ಸದ್ಬಳಕೆಗೆ ಅನುಕೂಲಕರ ವಾತಾವಣ ಉಂಟಾಗುತ್ತದೆ. ಅಲ್ಲದೇ ಇಂತಹ ಅಭಿಯಾನಗಳು ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ಉಂಟು ಮಾಡುತ್ತವೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿದ್ಯಾವತಿ ಎಸ್. ಅಕ್ಕಿ ಮಾತನಾಡಿ, ಮಹಿಳೆಯರು ಕಾನೂನು ಅರಿವು ಪಡೆದರೆ ಕಾನೂನು ನೆರವುಗಳ ಆಸರೆ ಪಡೆದು ಸಬಲೆಯಾಗಲು, ಸ್ವಾವಲಂಬಿಯಾಗಿ ಬದುಕಲು ಮತ್ತು ತನ್ನ ಹಕ್ಕುಗಳನ್ನು ಪಡೆದು ಸ್ವತಂತ್ರವಾಗಿ ಪುರುಷ ಸಮಾಜದಲ್ಲಿ ಬೆಳೆಯಲು ಸಜ್ಜಾಗುತ್ತಾಳೆಎಂದು ತಿಳಿಸಿದರು.
ಕುಟುಂಬ ದೌರ್ಜನ್ಯದಿಂದ, ವರದಕ್ಷಿಣೆ ಕಿರುಕುಳದಿಂದ, ಗಂಡನಿಂದ ಜೀವನಾಂಶ ಭತ್ಯೆ ಮುಂತಾದ ಸೌಲಭ್ಯಗಳನ್ನು ಪಡೆಯಲು ಕಾನೂನುಗಳು ಮಹಿಳೆಯರಿಗೆ ಹೊಂಬೆಳಕಿನ ಅಸ್ತ್ರವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸರ್ಕಾರಿ ಅಭಿಯೋಜಕ ಬಿ.ಆರ್. ನಾಡಗೌಡರ್ ಪ್ರಥಮ ವರ್ತಮಾನ ವರದಿ ಕುರಿತು, ವಕೀಲ ಎಸ್.ಬಿ.ಪಾಟೀಲ್ ಕರ್ನಾಟಕ ಭೂ-ಕಂದಾಯ ಕಾಯ್ದೆ ಮತ್ತು ಬದಲಾವಣೆ ಕುರಿತು ಮಾತನಾಡಿದರೆ, ನಾಗಮ್ಮ ಸರ್ಕಾರದ ಶೈಕ್ಷಣಿಕ ನೀತಿ-ಬದಲಾವಣೆ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು.
ಮಹಿಳೆಯರ ಹಕ್ಕುಗಳ ಕುರಿತು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಭೀಮಮ್ಮ ಮತ್ತು ಶಾರದ ರೂಪಕ ಪ್ರದರ್ಶಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದರ್ಜೆ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಕಾರಬಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ಡಿ.ಕೊಲ್ಲೂರು, ಸಿಇಓ ರವೀಂದ್ರ ವೈ.ಲಂಬು, ಪ್ರಾಚಾರ್ಯ ಚನ್ನಬಸ್ಸಪ್ಪ ಕುಳಗೇರಿ ವೇದಿಕೆ ಮೇಲಿದ್ದರು.