ಯಾದಗಿರಿ: ನಿರೀಕ್ಷೆಗಳಿಗೆ ತಣ್ಣೀರು ಎರಚಿದ ಬಜೆಟ್
ಗುರುಮಠಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ನಲ್ಲಿ ರಾಜ್ಯದ 30ನೇ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸೇರಿದಂತೆ ಸಣ್ಣ ಪುಟ್ಟ ಯೋಜನೆಗಳಿಗೆ ಅನುದಾನ ನೀಡಿರುವುದನ್ನು ಬಿಟ್ಟರೆ ಯಾವುದೇ ಹೊಸ ಯೋಜನೆಗಳಿಗೆ ಸ್ಥಾನ ಸಿಗದೆ ಇಲ್ಲಿನ ಜನತೆಯ ನಿರೀಕ್ಷೆಗಳಿಗೆ ತಣ್ಣೀರು ಎರಚಿದಂತಾಗಿದೆ.
ಜಿಲ್ಲೆಯಾಗಿ ಸುಮಾರು 4 ವರ್ಷಗಳು ಕಳೆದರೂ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಯಾದಗಿರಿ ಹಿಂದೆಯೇ ಉಳಿದಿದೆ. ಯಾದಗಿರಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಿದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಸುಮಾರು 300 ಕೋಟಿ ರು.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಆದರೆ ಈ ಹಣದಲ್ಲಿ ಕೇವಲ 50 ಕೋಟಿ ರು.ಗಳ ಅನುದಾನ ಮಾತ್ರ ಬಿಡುಗಡೆಯಾಗಿ ಅಭಿವೃದ್ಧಿ ಎಂಬುದು ಮಾರುದ್ದ ದೂರದಲ್ಲಿದೆ. ಸರ್ಕಾರ, ಈ ಬಾರಿಯೂ ಈ ಕಡೆ ಗಮನ ಹರಿಸದೆ ಇರುವುದು ಜನ ನಿರಾಶರಾಗುವಂತೆ ಮಾಡಿದೆ. ಈ ಬಾರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾತ್ರ ಆಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಸುಮಾರು 2,190 ಹುದ್ದೆಗಳು ಖಾಲಿ ಇದ್ದು ಎಲ್ಲಾ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳ ಕಾರುಬಾರು ನಡೆಯುತ್ತಲಿದೆ. ಇದರ ಬಗ್ಗೆ ಗಮನ ಹರಿಸಿ, ಖಾಲಿ ಇರುವ ಹುದ್ದೆಗಳ ಭರ್ತಿಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿಲ್ಲ.
ಅದರಂತೆ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಲಯಗಳು ಇಂದಿಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಗೆ ಸ್ವಂತ ಕಟ್ಟಡಗಳನ್ನು ಹೊಂದಲು ಕ್ರಮ ಜರುಗಿಸಬೇಕಾಗಿತ್ತು. ಅದು ಕೂಡ ಅಗಿಲ.್ಲ ಹಾಗೆಯೇ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳುವ ಸರ್ಕಾರ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಬಜೆಟ್ನಲ್ಲಿ ಏನನ್ನೂ ಹೇಳಿಲ್ಲ.
ತಾಲೂಕು ಘೋಷಣೆ ಇಲ್ಲ: ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೂತನವಾಗಿ 43 ತಾಲೂಕು ಕೇಂದ್ರಗಳ ಪಟ್ಟಿ ಮಾಡಿ ಘೋಷಣೆ ಮಾಡಿತ್ತು. ಅದಕ್ಕೆ ಬೇಕಾಗುವ ಹಣಕಾಸು ನೇರವು ನೀಡಿ ಅಧಿಕೃತವಾಗಿ ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡುವ ಭರವಸೆಯೂ ಕೂಡ ಸಿದ್ದರಾಮಯ್ಯನವರ ಬಜೆಟಿನಲ್ಲಿ ಈಡೇರಿಲ್ಲ.
ಒಟ್ಟಾರೆಯಾಗಿ ಇಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಯಾದಗಿರಿ ಜನತೆಯ ನಿರೀಕ್ಷೆಗಳಿಗೆ ತಣ್ಣೀರು ಎರಚಿ ನಿರಾಸೆಯನ್ನು ಉಂಟು ಮಾಡಿದೆ.