ಅನುದಾನಗಳಿಂದ ಹೊಲಿಗೆ ಯಂತ್ರ, ಗ್ಯಾಸ್ ವಿತರಣೆ
ಚಿತ್ತಾಪುರ: ಪುರಸಭೆಯಲ್ಲಿ 2013-14ನೇ ಸಾಲಿನಲ್ಲಿ ವಿಶೇಷ ಅನುದಾನದಲ್ಲಿ ವಿವಿಧ ವಾರ್ಡ್ಗಳಲ್ಲಿನ ಬಡ ಫಲಾನುಭವಿಗಳಿಗೆ ಅನಿಲ ಸಂಪರ್ಕ, ಹೊಲಿಗೆ ಯಂತ್ರ, ಕಂಪ್ಯೂಟರ್ ಸಲಕರಣೆ, ಉನ್ನತ ವ್ಯಾಸಂಗಕ್ಕಾಗಿ ಸಹಾಯಧನ ಹಾಗೂ ಸ್ವ ಸಹಾಯ ಗುಂಪುಗಳಿಗೆ ವರ್ತುಳ ನಿಧಿಯನ್ನು ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ವಿತರಿಸಿದರು. ನಂತರ ಮಾತನಾಡಿದ ಅವರು, 22.75 ರ ಅನುದಾನದಲ್ಲಿ ಪ.ಜಾ,ಪ.ಪಂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ 72 ವಿದ್ಯಾರ್ಥಿಗಳಿಗೆ 3.70 ಲಕ್ಷ ಹಣ ಒದಗಿಸಲಾಗಿದೆ. ಮತ್ತು ಪ್ರತಿ ಫಲಾನುಭವಿಗೆ 8 ಸಾವಿರದಂತೆ 45 ಫಲಾನುಭವಿಗಳಿಗೆ 3.60 ಲಕ್ಷದಲ್ಲಿ ಅನಿಲ ಸಂಪರ್ಕ ಮತ್ತು 4 ಶಿಕ್ಷಣ ಸಂಸ್ಥೆಗಳಿಗೆ 1.84 ಹಣದಲ್ಲಿ ಕಂಪ್ಯೂಟರ್ ಸಲಕರಣಿಗಳನ್ನು ನೀಡಲಾಗುತ್ತಿದೆ.
ಶೇ.7.25 ಅನುದಾನದಲ್ಲಿ ಇತರೆ ಹಿಂದುಳಿದ ವರ್ಗದ 71 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ 2.60 ಲಕ್ಷ, ಪ್ರತಿ ಫಲಾನುಭವಿಗೆ 8 ಸಾವಿರದಂತೆ 25 ಫಲಾನುಭಿಗಳಿಗೆ 2 ಲಕ್ಷ ಅನುದಾನದಲ್ಲಿ ಅನಿಲ ಸಂಪರ್ಕ, 2 ಶಿಕ್ಷಣ ಸಂಸ್ಥೆಗಳಿಗೆ 1.74 ಹಣದಲ್ಲಿ ಕಂಪ್ಯೂಟರ್ ಸಲಕರಣೆ, 20 ಫಲಾನುಭವಿಗಳಿಗೆ ಟೈಲರಿಂಗ್ ಮಷಿನ್ ನೀಡಾಗುತ್ತಿದೆ.
ಶೇ.3 ರ ಅನುದಾನದಲ್ಲಿ ಬಿಪಿಎಲ್ ಫಲಾನುಭವಿಗಳಿಗೆ 15 ಜನರಿಗೆ ಅನಿಲ ಸಂಪರ್ಕ, ಎಸ್ಜೆಎಸ್ಆರ್ವೈ ಯೋಜನೆಯಡಿ 4 ಸ್ವ ಸಹಾಯ ಗುಂಪುಗಳಿಗೆ 20 ಸಾವಿರದಂತೆ 80 ಸಾವಿರ ಹಣ ನೀಡಲಾಗಿದೆ ಎಂದರು.
ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಪುರಸಭೆಯಿಂದ ಒದಗಿಸುತ್ತಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಂಡಲ್ಲಿ ಸರ್ಕಾರದ ಯೋಜನೆಗಳು ಸದುಪಯೋಗವಾಗುತ್ತವೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಕಡಬೂರ, ಮುಖ್ಯಾಧಿಕಾರಿ ಅಶೋಕ ಬಿಲಗುಂದಿ, ಸದಸ್ಯ ರಸೂಲ ಮುಸ್ತಾಫಾ, ಶಿವಾಜಿ ಕಾಶಿ, ಸುರೇಶ ಅಳ್ಳೋಳ್ಳಿ, ಹೀರು, ದಶರಥ ದೊಡ್ಮನಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಇತರರು ಇದ್ದರು.