ಅಲ್ಪಸಂಖ್ಯಾತರಿಗೆ 800 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.15
ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಕಳೆದ ಸಾಲಿನ ಬಜೆಟ್ಟಿಗಿಂತ ಪ್ರಸಕ್ತ ಬಜೆಟ್ಟಿನಲ್ಲಿ 130 ಕೋಟಿ ಅಧಿಕ ಅನುದಾನ ಲಭ್ಯವಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಅನುಕೂಲವಾಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ, ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ 671 ಕೋಟಿ ಹಣ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ದೊರಕಿತ್ತು. ಈಗ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನಲ್ಲಿ 800 ಕೋಟಿಗೆ ಹೆಚ್ಚಳವಾಗಿದೆ. ಇದು 130 ಕೋಟಿಗೆ ಏರಿಕೆ ಕಂಡಿದೆ.
ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಇದರ ಜೊತೆಗೇ ಕಳೆದ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ಪರ್ಗಗಳವರಿಗೆ ವಿವಿಧ ಯೋಜನೆಗಳಡಿ 367 ಕೋಟಿ ಸಾಲ ಮನ್ನಾ ಮಾಡಲಾಗಿತ್ತು.
ಈ ಬಾರಿ 2,484 ಕೋಟಿಯಷ್ಟಾಗಿದೆ. ಹೊಸ ಯೋಜನೆಗಳಿಗೆ ಹೆಚ್ಚಿನ ಹಣ ದೊರಕಿದ್ದಲ್ಲದೆ, ಸಾಲ ಮನ್ನಾ ರೂಪದಲ್ಲಿಯೂ ಸಿದ್ದರಾಮಯ್ಯನವರು ಈ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರು, ಶೋಷಿತರ ಸಮುದಾಯದವರಿಗೆ ವರದಾನ ನೀಡಿದ್ದಾರೆ ಎಂದರು.
ಸಂಶೋಧನಾ ಕೇಂದ್ರ: ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಿ ಅನುಷ್ಠಾನಕ್ಕೆ ತರುವ ದಿಶೆಯಲ್ಲಿ ಈ ಬಜೆಟ್ಟಿನಲ್ಲಿ ತಾವು ಸಲ್ಲಿಸಿದ್ದ ಸಂಶೋಧನಾ ಕೇಂದ್ರದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿದೆ. ಬರುವ ದಿನಗಳಲ್ಲಿ ಮುಸ್ಲಿಂ ವಿವಿ ಸಂಸ್ಥಾಪಕ ಸೈಯ್ಯದ್ ಅಹ್ಮದ್ಖಾನ್ ಹೆಸರಲ್ಲಿ ಪಠ್ಯ ಹಾಗೂ ಸಂಶೋಧನಾ ಕೇಂದ್ರವನ್ನು ಬೆಂಗಳೂರಲ್ಲಿ ಸ್ಥಾಪಿಸಿ ತಜ್ಞರನ್ನು ನೇಮಕ ಮಾಡಿ ಅಲ್ಪಸಂಖ್ಯಾತರ ಕಲ್ಯಾಣದ ವೈಜ್ಞಾನಿಕ ಮಾಹಿತಿ ಸಂಗ್ರಹ, ಅಧ್ಯಯನಕ್ಕೆ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಜಿಲ್ಲೆಗೆ ಸಿಕ್ಕಿದ್ದು..: ಅಲ್ಪಸಂಖ್ಯಾತರಿಗಾಗಿಯೇ ಕೇಂದ್ರದ ನವೋದಯ ಶಾಲೆಗಳ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹಂತಹಂತವಾಗಿ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.
ಈ ವರ್ಷ 2 ಶಾಲೆಗಳು ಗುಲ್ಬರ್ಗ ಜಿಲ್ಲೆಗೆ ಮಂಜೂರಾಗಿವೆ. ಇಲ್ಲಿನ ಉತ್ತರ ಹಾಗೂ ದಕ್ಷಿಣ ಅಸೆಂಬ್ಲಿ ಕ್ಷೇತ್ರಗಳಲ್ಲಿ ಇವುಗಳು ಸ್ಥಾಪನೆಯಾಗಲಿವೆ.
ಅಲ್ಪಸಂಖ್ಯಾತರಿಗಾಗಿಯೇ ಮೊರಾರ್ಜಿ 3 ಶಾಲೆಗಳು, ಪಿಯುಸಿ ಕಾಲೇಜುಗಳು 2 ಈ ವರ್ಷ ಮಂಜೂರು ಮಾಜಲಾಗುತ್ತಿದೆ.
ಆಯ್ದ 10 ಸ್ಥಳೀಯ ಸಂಸ್ಥೆಗಳಲ್ಲಿ ಕಸಾಯಿಖಾನೆ ಅಭಿವೃದ್ಧಿ, ಕೆರೆಗಳು, ಉದ್ಯಾನವನ ಅಭಿವೃದ್ಧಿಗೆ 25 ಕೋಟಿಗೂ ಹೆಚ್ಚು ಹಣ ಮೀಸಲಿಡಲಾಗಿದೆ ಎಂದು ಇಸ್ಲಾಂ ಬಜೆಟ್ನಲ್ಲಿ ಮಂಜೂರಾಗಿರುವ ಅಲ್ಪಸಂಖ್ಯಾತರ ಕಲ್ಯಾಣದ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.