ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಚ್ಕೆಆರ್ಡಿಬಿಗೆ 600 ಕೋಟಿ

Mainashree
Updated On : 17 Feb 2014, 10:53 am

ಗುಲ್ಬರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ನೀರಾವರಿ, ಅಲ್ಪಸಂಖ್ಯಾತರ ಕಲ್ಯಾಣ, ಬಡವರ ಮತ್ತು ಹಿಂದುಳಿದವರ ಬಗ್ಗೆ ವಿಶೇಷ ಮುತುವರ್ಜಿವಹಿಸುವ ಬಜೆಟ್ ಎಂದು ಬಣ್ಣಿಸಿರುವ ಪೌರಾಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಹೈ-ಕ ಭಾಗಕ್ಕೂ ಬಜೆಟ್ ಹಲವು ಕೊಡುಗೆಗಳನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೈ-ಕ ಭಾಗದ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಭಾಗದ ಅಭಿವೃದ್ಧಿಗೆ ಎಚ್ಕೆಆರ್ಡಿಬಿಗೆ 600 ಕೋಟಿ, ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ 1,037 ಕೋಟಿ ಒದಗಿಸುವುದರ ಮೂಲಕ ಈ ಭಾಗಕ್ಕೆ ನ್ಯಾಯ ನೀಡಿದ್ದಾರೆ. ಗುಲ್ಬರ್ಗದಲ್ಲಿ ಕ್ಯಾನ್ಸಪ್ ಟೆರಿಟೋರಿಯಲ್ ಆಸ್ಪತ್ರೆಗೂ ಅಸ್ತು ಎಂದಿದ್ದಾರೆ. ಗಣಿತವನ್ನು ಸರಳೀಕರಣಗೊಳಿಸಲು ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹೈ-ಕ ಭಾಗಕ್ಕೆ ಅಕ್ಷರಾ ಫೌಂಡೇಶನ್ ವತಿಯಿಂದ ಅಕ್ಷರ ಗಣಿತ ಕಿಟ್ಸ್ ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಅನುಮೋದನೆ ದೊರಕಿದೆ ಎಂದು ಇಸ್ಲಾಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬಜೆಟ್ನಲ್ಲಿ ಅನುಮೋದನೆ: ಹೈ-ಕ ಭಾಗದಲ್ಲಿ 250 ಗ್ರಾಮ ಪಂಚಾಯ್ತಿಗಳಲ್ಲಿ ಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮನರೇಗಾ ಅಡಿಯಲ್ಲಿ ಹೆಚ್ಕೆಆರ್ಡಿಬಿ ಸಂಯೋಗದೊಂದಿಗೆ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲು ಬಜೆಟ್ನಲ್ಲಿ ಅನುಮೋದನೆ ದೊರಕಿದೆ. ಹೈ-ಕ ವಿಭಾಗದ 100 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 100 ಪ್ರಾಥಮಿಕ ಶಾಲೆಗಳನ್ನು ಹೆಚ್ಕೆಆರ್ಡಿಬಿ ಸಹಯೋಗದೊಂದಿಗೆ ಮೇಲ್ದರ್ಜೆಗೇರಿಸಿ ಮಾದರಿಯ ಪ್ರಾಥಮಿಕ ಶಾಲೆಗಳನ್ನಾಗಿಸುವ ಯೋಜನೆಯೂ ಈ ಭಾಗಕ್ಕೆ ದೊರಕಿದೆ ಎಂದು ಸಚಿವ ಇಸ್ಲಾಂ ಬಜೆಟ್ನಲ್ಲಿ ಹೈ-ಕ 6 ಜಿಲ್ಲೆಗಳಿಗೆ ದೊರಕಿರುವ ಕೊಡುಗೆಗಳನ್ನು ಪಟ್ಟಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಹೈ-ಕ ಪ್ರಾಂತದಲ್ಲಿ ಒತ್ತು: ಕೊಳಚೆ ಮುಕ್ತ ನಗರವಾಗಿಸುವ ಯೋಜನೆಯಲ್ಲಿಯೂ ಗುಲ್ಬರ್ಗ ಸೇರಿದಂತೆ ಹೈ-ಕ ಭಾಗದ ಜಿಲ್ಲೆಗಳು ಸೇರ್ಪಡೆಯಾಗಿವೆ. ಕಸಾಯಿಖಾನೆ ನಿರ್ಮಾಣಕ್ಕೂ ಯೋಜನೆ ಹೈ-ಕ ಭಾಗಕ್ಕೆ ದೊರಕಿದೆ. ಪಾರ್ಕ್ಗಳು, ಕೆರೆಗಳ ಅಭಿವೃದ್ಧಿಗೂ ಬಜೆಟ್ ಹೈ-ಕ ಪ್ರಾಂತದಲ್ಲಿ ಒತ್ತು ನೀಡಿದೆ ಎಂದು ಹೇಳಿದ್ದಾರೆ.
ನಗರಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದು, 14 ಕುಡಿವ ನೀರು ಮತ್ತು 10 ಒಳಚರಂಡಿ ಯೋಜನೆಗಳ ಅನುಷ್ಠಾನದ ಗುರಿಯೊಂದಿಗೆ 697 ಕೋಟಿ 2014-15ನೇ ಸಾಲಿಗೆ ಸಾಲಿಗೆ ನಿಗದಿ ಮಾಡಲಾಗಿದೆ.  ಯುಐಡಿಎಸ್ಎಸ್ಎಂಟಿ ಯೋಜನೆಯಡಿಯಲ್ಲಿ 6 ಕುಡಿವ ನೀರಿನ ಯೋಜನೆ 7 ಒಳಚರಂಡಿ ಯೋಜನೆಗಳ ಸುಧಾರಣೆಗೆ 247. 20 ಕೋಟಿ ಒದಗಿಸಲಾಗಿದೆ. 10 ಪಟ್ಟಣಗಳಲ್ಲಿ ಕುಡಿವ ನೀರಿನ ಹೊಸ ಯೋಜನೆ, 2 ಒಳಚರಂಡಿ ಯೋಜನೆಗಾಗಿ ಇದೇ ಯೋಜನೆಯಲ್ಲಿ 400 ಕೋಟಿ ಒದಗಿಸಲಾಗಿದೆ ಎಂದು ಸಚಿವರು ಬಜೆಟ್ ಪ್ರಗತಿಪರವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement