ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಉಚಿತ ಲಸಿಕೆ
ಗುರುಮಠಕಲ್: ರಾಜ್ಯದಲ್ಲಿ ತಲೆದೋರಿರುವ ಜಾನುವಾರುಗಳ ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ಪಶು ಇಲಾಖೆ ವತಿಯಿಂದ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಕಡ್ಡಾಯವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಯಾದಗಿರಿ ಪಶು ವೈದ್ಯಾಧಿಕಾರಿ ಡಾ. ಬದ್ರಿನಾಥ ದೇಶಪಾಂಡೆ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಲು ಬಾಯಿ ರೋಗ ನಿಯಂತ್ರಣ ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಭಾಗದಲ್ಲಿ ಹೆಚ್ಚಿನ ಅನಕ್ಷರಸ್ಥ ರೈತರಿದ್ದು ಅವರಿಗೆ ರೋಗಗಳ ಲಕ್ಷಣಗಳು ತಿಳಿಯುವುದಿಲ್ಲ. ಹೀಗಾಗಿ ರೈತರ ಜಾನುವಾರುಗಳಿಗೆ ಕುತ್ತು ಬಾರದಂತೆ ಪಶು ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳ ಸದುಪಯೋವನ್ನು ಪಡೆದು ರೈತರು ಹೆಚ್ಚಿನ ಕಾಳಜಿ ವಹಿಸಿ ಲಸಿಕೆಯನ್ನು ಹಾಕಿಸಿಬೇಕು. ತಮ್ಮ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರ ಸತತ 6 ವರ್ಷಗಳಿಂದ ಜಾನುವಾರುಗಳಲ್ಲಿ ರೋಗ ನಿಯಂತ್ರಿಸಲು ಉಚಿತ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ರೋಗದಿಂದ ಜಾನುವಾರುಗಳು ಸಾಯುವುದಿಲ್ಲ. ಆದರೆ ಅವುಗಳ ಬಾಯಿಯಲ್ಲಿ ಹುಣ್ಣುಗಳು ಹುಟ್ಟಿ, ಜೊಲ್ಲು ಸುರಿಸುತ್ತಾ ಕ್ರಮೇಣ ನಿಶ್ಯಕ್ತಗೊಂಡು ಕೆಲಸಕ್ಕೆ ಬಾರದಂತಾಗುತ್ತವೆ ಎಂದು ಮಾಹಿತಿ ನೀಡಿದರು.
ರೈತರು ಜಾನುವಾರುಗಳಲ್ಲಿ ಇಂತಹ ಯಾವುದೇ ಲಕ್ಷಣಗಳು ಕಂಡು ಬಂದರೇ ತಕ್ಷಣ ಸಮೀಪದ ಪಶು ಆಸ್ಪತ್ರೆಯನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಕೊಡಿಸಬೇಕು ಎಂದವರು ಹೇಳಿದರು. ಈ ಕಾರ್ಯಕ್ರಮ ಫೆ.15 ರಿಂದ ಮಾರ್ಚಿ15ರವರೆಗೆ ನಡೆಯಲಿದೆ ಎಂದು ವಿವರಿಸಿದರು.
ಜಿ.ಪಂ ಅಧ್ಯಕ್ಷೆ ಭೀಮವ್ವ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಶರಣ ಭೂಪಾಲರೆಡ್ಡಿ, ಕೃಷ್ಣ ಚಪೇಟ್ಲಾ, ಸಹಾಯಕ ಪಶು ನಿರ್ದೇಶಕ ಡಾ. ಬದ್ರುದ್ದೀನ್ ಚಿಂತಕುಂಟಿ ಇತರರಿದ್ದರು.