ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖಮರುಲ್ ಸೇರಿ 12 ಗಣ್ಯರಿಗೆ ಗುವಿವಿ ಗೌಡಾ?

Mainashree
Updated On : 18 Feb 2014, 11:48 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಫೆ.17
ಗೌರವ ಡಾಕ್ಟರೇಟ್ ನೀಡುವ ವಿಷಯದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಮಾದ ಎಸಗುತ್ತಲೇ ವಿವಾದ ಮೈಮೇಲೆಳೆದುಕೊಳ್ಳುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದೆ.
  ಪ್ರಸಕ್ತ ವರ್ಷ ಅಂದರೆ 2014-15ನೇ ಸಾಲಿನ ಗೌರವ ಡಾಕ್ಟರೇಟ್‌ಗೆ ಅಲ್ಪಸಂಖ್ಯಾತ, ಪೌರಾಡಳಿ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ 12 ಜನರನ್ನು ಗುರುತಿಸಿದ್ದು, ಫೆ.20ರಂದು ನಡೆಯುವ ತನ್ನ 32ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ 'ಗೌರವ' ನೀಡಲು ಸಿದ್ಧತೆ ನಡೆಸಿದೆ.   
  2011-12ರಲ್ಲಿ 9, 2012-13ರಲ್ಲಿ 10 ಹಾಗೂ 2013-14ರಲ್ಲಿ 11 ಜನರಿಗೆ ಗೌರವ ಡಾಕ್ಟರೇಟ್ ನೀಡಿ ದಾಖಲೆ ಬರೆದಿತ್ತು. ಅಲ್ಲದೇ ಇದೇ ವಿವಾದಕ್ಕೂ ಕಾರಣವಾಗಿತ್ತು. ಆದರೂ ಎಚ್ಚೆತ್ತುಕೊಳ್ಳದೇ ಈಗ ಅದೇ ದಾಖಲೆಯನ್ನು ಮುರಿಯಲು ಸಜ್ಜಾಗಿದೆ. 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಖಮರುಲ್ ಇಸ್ಲಾಂ, ಜೇವರ್ಗಿಯ ಸೊನ್ನದ ವಿರಕ್ತ ಮಠಾಧೀಶ ಶಿವಾನಂದ ಸ್ವಾಮೀಜಿ, ಹಾರಕೂಡದ ಚೆನ್ನವೀರ ಶಿವಾಚಾರ್ಯ, ಹೋರಾಟಗಾರ ಶಿವರಾಂ ಮೋಘಾ, ಕ್ರಿಕೆಟ್ ಪಟು ರಾಹುಲ್ ದ್ರಾವಿಡ್, ಸಾಹಿತಿ ಎ.ಕೃಷ್ಣ ಸುರಪುರ, ಕಲಾವಿದ ಎ.ಎಸ್. ಪಾಟೀಲ್ ಹಾಗೂ ನಾಲ್ವರು ಪತ್ರಕರ್ತರು ಸೇರಿದಂತೆ 12 ಜನರಿಗೆ ಗೌಡಾ ನೀಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಸಂಭವನಿಯರ ಪಟ್ಟಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೂ ರವಾನಿಸಲಾಗಿದೆ.
  ಗುಲ್ಬರ್ಗ ವಿವಿ ಗೌಡಾ ಸಾಕಷ್ಟು ವಿವಾದ ಹುಟ್ಟುಹಾಕಿದ್ದರೂ ಈ ವಿವಿ ಸಲ್ಲಿಸುವ ಸಾಧಕರ ಪಟ್ಟಿಗೆ ಇದುವರೆಗೂ ರಾಜ್ಯಪಾಲರ ಕಚೇರಿಯಿಂದ ಯಾವುದೇ ತಕರಾರು, ಆಕ್ಷೇಪಣೆ ವ್ಯಕ್ತವಾಗಿಲ್ಲ. ಹೀಗಾಗಿ ವಿವಿ ಸಲ್ಲಿಸಿರುವ 12 ಸಾಧಕರ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕುವ ನಿರೀಕ್ಷೆ ಇದೆ.
ಮಂತ್ರಿಗಿರಿಗೆ ಗೌಡಾ ಯಾಕೆ?: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರಂಸಿಂಗ್ ಅವರಿಗೆ ಜ್ಞಾನಗಂಗೆ ಗೌರವ ಡಾಕ್ಟರೇಟ್ ಘೋಷಿಸಿದ್ದ ಸಂದರ್ಭದಲ್ಲಿ ರಾಜಕಾರಣಿಗಳಿಗೆ, ಮಂತ್ರಿಗಳಿಗೆ, ಮಠಾಧೀಶರಿಗೇಕೆ ಗೌರವ ಡಾಕ್ಟರೇಟ್ ಎಂದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
  ಅಲ್ಲದೇ ಪ್ರಮುಖ ಕೋಮಿನ ಮಠಾಧೀಶರ ಹೆಸರು ಪ್ರಸ್ತಾಪವಾದಾಗಲೂ ವಿವಾದವಾಗಿತ್ತು. ಇಂಥ ಕೆಟ್ಟ ಪ್ರವೃತ್ತಿಯು ಡಾ. ಪುಟ್ಟಯ್ಯ ಕುಲಪತಿಗಳಾಗಿ ಬಂದ ನಂತರ ಶುರುವಾಗಿದೆ ಎಂದು ಕೆಲವು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಕದ್ದು ಮುಚ್ಚಿ ಪಟ್ಟಿ ಸಿದ್ಧಪಡಿಸೋದು ಯಾಕೆ?: ಗೌರವ ಡಾಕ್ಟರೇಟ್‌ಗೆ ಸಾಧಕರ ಆಯ್ಕೆಯಲ್ಲಿ ವಿವಿ ಯಾವುದೇ ಮಾನದಂಡ ಇದುವರೆಗೂ ಹೊಂದಿಲ್ಲ. ಕುಲಪತಿಗಳ ನಿರ್ಣಯವೇ ಈ ವಿಚಾರದಲ್ಲಿ ಅಂತಿಮ. ಹೀಗಾಗಿ ನಿಜವಾದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇಲ್ಲಿ ನಡೆಯುತ್ತಿಲ್ಲ. ಒಬ್ಬಿಬ್ಬರು ಸಾಧಕರ ಹೆಸರು ಮುಂದೆ ಮಾಡಿ ವಿವಿ ಗೌಡಾ ಆಯ್ಕೆಯಲ್ಲಿ ತನ್ನದೇ ಬೇಕಾಬಿಟ್ಟಿತನ, ಜಾತಿವಾದ ಪೋಷಿಸಿಕೊಂಡು ಹೊರಟಿದೆ ಎಂಬುದು ಬುದ್ಧಿಜೀವಿಗಳು, ಚಿಂತಕರ ಅಭಿಮತ.

ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement