ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಂಡೆ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹ: ಪ್ರತಿಭಟನೆ

Mainashree
Updated On : 18 Feb 2014, 11:49 am

ಗುರುಮಠಕಲ್: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ಸಿಬಿಐಗೆ ವಹಿಸಿ  ಇದರ ಸತ್ಯಾಸತ್ಯತೆಯನ್ನು  ಬಯಲಿಗೆಳೆಯಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ವೈಜನಾಥ ಗುರುಮಠಕಲ ಹಿರೇಮಠ ಆಗ್ರಹಿಸಿದ್ದಾರೆ.
ಜಿಲ್ಲಾ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದ ಅವರು, ಗುಲ್ಬರ್ಗ ಸ್ಟೇಷನ್ ಬಜಾರ್ ಠಾಣೆ ಅಧಿಕಾರಿ ಬಂಡೆ ಸಾವಿನ ಪ್ರಕರಣದಲ್ಲಿ ಸತ್ಯಸಂಗತಿ ಮರೆಮಾಚಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಭೂಗತ ಪಾತಕಿ ಮುನ್ನಾ ಬಂದಿಯಾಗಿದ್ದರೆ, ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಆಡಳಿತಾರೂಢ ಸರ್ಕಾರಗಳು ಹಾಗೂ ಇತರ ರಾಜಕಾರಣಿಗಳ ಬಣ್ಣ ಬಯಲಾಗುತ್ತಿತ್ತು.  ಆದ್ದರಿಂದಲೇ ಬಂಡೆ ಹತ್ಯೆ ಹಿಂದೆ ಕಾಣದ ಕೈಗಳ ದುಷ್ಕತ್ಯ ಅಡಗಿದೆ ಎಂಬ  ಅನುಮಾನ ಮೂಡಿದೆ. ಇದರ ಸತ್ಯಾಸತ್ಯತೆ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಹೇಳಿದರು.
ಈಗಾಗಲೇ ಐಜಿಪಿ ವಜೀರ್ ಅಹ್ಮದ್ ಅವರು ಸಹ ಸಿಬಿಐ ತನಿಖೆ ನಡೆಸುವಂತೆ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು  ಸತ್ಯಾಸತ್ಯತೆ ಬಯಲಿಗೆಳೆಯಲು ಸರ್ಕಾರಕ್ಕೆ ಯಾಕೆ ಮನಸ್ಸಿಲ್ಲ ಎಂದು ಪ್ರಶ್ನಿಸಿದರು. ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಚಂದ್ರಶೇಖರ ಆರ್. ಡೋಣೂರು ಮಾತನಾಡಿ ಬಂಡೆ ಅವರ ಪತ್ನಿ ಅವರೇ ಸಿಓಡಿ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಎಲ್ಲೆಡೆ ಸಿಬಿಐ ತನಿಖೆ ನಡೆಸಬೇಕು ಎಂಬ ಒತ್ತಡಗಳು ಇರುವುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸುಭಾಷ ವೃತ್ತ, ಶಾಸ್ತ್ರಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಘವೇಂದ್ರರಾವ್ ಹಳ್ಳೂರು ಮನವಿ ಸ್ವೀಕರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನಿವೃತ್ತ ಪೊಲೀಸ್ ಮಹಾದೇವಪ್ಪ ಜವಳಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್, ವಿಜಯ ಪಾಟೀಲ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement