ಸುದ್ದಿ ಸಂಕ್ಷೇಪ
ಚಿಕ್ಕಮ್ಮಳ ಮೇಲೆ ಆತ್ಯಾಚಾರ
ಹಿರೇವಡಗೇರಾ: ಜಾತ್ರೆ ಮುಗಿಸಿಕೊಂಡು ಅಕ್ಕನ ಮನೆಗೆ ಹೋದಾಗ ಅಕ್ಕನ ಗಂಡನ ಅಣ್ಣನ ಮಗ ಬಲಾತ್ಕಾರ ಮಾಡಿದ್ದಾನೆಂದು ಮಾಳಮ್ಮ ಗಂಡ ಮಲ್ಲಪ್ಪ ಪರಮಣ್ಣೋರ (28) ಆರೋಪಿಸಿ ಇಲ್ಲಿಯ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಘಟನೆಯ ವಿವಿರ ಶಹಾಪುರ ತಾಲೂಕಿನ ಬಲ್ಕಲ್ ಗ್ರಾಮದ ಮಹಿಳೆ (28) ಹಾಲಗೇರಾದ ಜಾತ್ರೆ ಮುಗಿಸಿಕೊಂಡು ಅಕ್ಕನ ಗ್ರಾಮವಾದ ಗೋಡಿಹಾಳ ಗ್ರಾಮದಲ್ಲಿ ಎರಡು ದಿನ ಇದ್ದು ಹೋಗೋಣ ಎಂದು ಬಂದ ಮಹಿಳೆಯ ಮೇಲೆ ಬಲಾತ್ಕಾರವಾಗಿದೆ. ಕೋಣೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ವರಸೆಯಲ್ಲಿ ಮಗನಾಗಬೇಕಾದ ಮಹಾದೇವ ತಂದೆ ಮರೆಪ್ಪ ರಾಮಣ್ಣೋರ ಭಾನುವಾರ ಬಲತ್ಕಾರ ಮಾಡಿದ್ದಾನೆಂದು ಘಟನೆಗೆ ಒಳಗಾದ ಮಹಿಳೆ ದೂರಿದ್ದಾಳೆ. ಬೆಳಿಗ್ಗೆ ಠಾಣೆಗೆ ದೂರುಕೊಡಬೇಕೆಂದು ಬರುವಾಗ ಮಾರ್ಗ ಮಧ್ಯದಲ್ಲಿ ಮಲ್ಲರಡ್ಡಿ ತಂದೆ ನಿಂಗಪ್ಪ, ಮರೆಪ್ಪ ತಂದೆ ನಿಂಗಪ್ಪ, ಹಣಮಂತ ತಂದೆ ನಿಂಗಪ್ಪ ಮಾಳಪ್ಪ, ಲಕ್ಷ್ಮಿ ಗಂಡ ಮರೆಪ್ಪ ಇವರೆಲ್ಲರೂ ಕೂಡಿ ಮನಬಂದಂತೆ ಥಳಿಸಿದ್ದಾರೆಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡು ಹಿರೇವಡಗೇರಾ ಠಾಣೆಯ ಆರಕ್ಷಕ ಉಪನಿರೀಕ್ಷಕ ಮಲ್ಲಿಕಾರ್ಜುನ ಇಕ್ಕಳಕಿ ಆರೋಪಿಗಳೆಲ್ಲ ತಲೆ ಮರೆಸಿಕೊಂಡಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ದಲಿತನ ಹತ್ಯೆ: ಧರಣಿ
ಶಹಾಬಾದ್: ಶಹಾಪುರ ತಾಲೂಕಿನ ಕನ್ಯಾ ಕೋಳೂರಲ್ಲಿ ಜ.17ರಂದು ನಡೆದ ದೇವೀಂದ್ರ ದಳಪತಿಯ ಹತ್ಯೆಯನ್ನು ಖಂಡಿಸಿ ಸೋಮವಾರ ನಗರದಲ್ಲಿ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮಾದಿಗ ದಂಡೋರ ಜಿಲ್ಲಾಧ್ಯಕ್ಷ ನಾಮದೇವ ಸಿಪ್ಪಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಹಿರಿಯ ದಲಿತ ಮುಖಂಡ ಸುರೇಶ ಮೆಂಗನ್ ಮಾತನಾಡಿದರು. ಮನವಿ ಪತ್ರದಲ್ಲಿ ಕೊಲೆಯಾದ ದೇವಿಂದ್ರಪ್ಪ ದಳಪತಿ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ನೀಡಬೇಕು. ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಗ್ರಾಮದ ದಲಿತ ಕೇರಿಗೆ ಮೂಲಸೌಕರ್ಯ ಒದಗಿಸಿಕೊಡಬೇಕು. ದಳಪತಿ ಕುಟುಂಬಕ್ಕೆ ಕಾನೂನು ರಕ್ಷಣೆ ನೀಡಬೇಕು. ಇಂತಹ ಘಟನೆಗೆ ಕಾರಣರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರನ್ನು ಹೊಣೆಗಾರರನ್ನಾಗಿ ಮಾಡಿ ಸಮರ್ಪಕ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರು. ಗ್ರಾಮೀಣ ಘಟಕದ ಅಧ್ಯಕ್ಷ ರವಿ ಬೆಳಮಗಿ, ನಗರ ಅಧ್ಯಕ್ಷ ಸಂತೋಷ ಹುಲಿ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ನರಸಿಂಹಲು ರಾಯಚೂರಕರ್, ಸತೀಷ್ ಕಂಬಾನೂರ, ರಾಮಸ್ವಾಮಿ ಗಿರಿಗಿರಿಕರ್, ಗೋಪಾಲ ದಂಡೋತಿಕರ್ ಮತ್ತಿತರರು ಇದ್ದರು.
'ಕೇಜ್ರಿವಾಲ್ ಬಗ್ಗೆ ಖರ್ಗೆ ಹಗುರ ಮಾತು ಸಲ್ಲದು'
ಗುರುಮಠಕಲ್: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಅರವಿಂದ ಕೇಜ್ರಿವಾಲ್ ಕುರಿತು ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕ ಅಮೀನರೆಡ್ಡಿ ಪಾಟೀಲ್ ಹೇಳಿದ್ದಾರೆ. ಪಟ್ಟಣದ ಬಸ್ ನಿಲ್ದಾಣದ ಸಮೀಪ 'ಮನೆ ಮನೆಗೆ ಆಮ್ ಆದ್ಮಿ- ಮನೆ ಮನೆಯಲ್ಲಿ ಆಮ್ ಆದ್ಮಿ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಪತ್ರಕರ್ತರ ಜೊತೆ ಮಾತನಾಡಿದ ಪಾಟೀಲ್, ಖರ್ಗೆ ಅವರು ಈ ಭಾಗದ ಪ್ರಬಲ ನಾಯಕರು ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಪ್ರಸಕ್ತ ಭ್ರಷ್ಟ ರಾಜಕಾರಣಿಗಳೇ ತುಂಬಿರುವ ವ್ಯವಸ್ಥೆಯಲ್ಲಿ ರಾಜಕೀಯ ಮಾಡುತ್ತಿರುವ ಖರ್ಗೆ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು. ಪಕ್ಷದ ಜಿಲ್ಲಾ ಸಂಚಾಲಕ ವೈಜನಾಥ ಸ್ವಾಮಿ ಹಿರೇಮಠ ಮಾತಾಡಿ, ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟಮುಕ್ತ, ಸ್ವಚ್ಛ, ಪಾರದರ್ಶಕ ಸರ್ಕಾರ ಸ್ಥಾಪನೆ ಮಾಡುವ ಮಹೋನ್ನತ ಉದ್ದೇಶ ಹೊಂದಿರುವುದನ್ನು ದೇಶದ ಜನತೆ ಮನಗಂಡಿದ್ದಾರೆ. ಹೀಗಾಗಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಅವರಿಗೆ ಜನ ಬೆಂಬಲ ಲಭಿಸಿತು ಎಂದು ಹೇಳಿದ್ದಲ್ಲದೇ, ಇದೀಗ ಜನಲೋಕ ಪಾಲ್ ವಿಧೇಯಕ ಮಂಡಿಸಲು ಮುಂದಾದ ಅವರಿಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ದೇಶದ ಎಲ್ಲ ಪಕ್ಷಗಳು ವಿರೋಧ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದರು. ಭ್ರಷ್ಟಾಚಾರದಿಂದ ರೋಸಿಹೋಗಿರುವ ದೇಶದ ಜನತೆ ಆಮ್ ಆದ್ಮಿ ಪಾರ್ಟಿಗೆ ಸ್ವಯಂ ಪ್ರೇರಣೆಯಿಂದ ಸೇರ್ಪಡೆಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದು ಈ ಪಕ್ಷಕ್ಕೆ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದರು.
ಆಹಾರ ಆದಾಲತ್ಗೆ ಸಹಕರಿಸಲು ಸಲಹೆ
ಸುರಪುರ: ಪ್ರತಿ ತಿಂಗಳ 7ನೇ ತಾರೀಕಿನಂದು ತಾಲೂಕಿನ ಎಲ್ಲ ಪಡಿತರ ಅಂಗಡಿಗಳಲ್ಲಿ ಆಹಾರ ಆದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಡೀಲರ್ಗಳು ಸಹಕರಿಸಬೇಕು ಎಂದು ಆಹಾರ ನಿರೀಕ್ಷಕ ವಿಶ್ವರಾಧ್ಯ ಸತ್ಯಂಪೇಟೆ ತಿಳಿಸಿದರು. ಇಲ್ಲಿಯ ತಹಸೀಲ್ ಕಚೇರಿಯಲ್ಲಿ ಸೋಮವಾರ ನಡೆದ ಆಹಾರ ಇಲಾಖೆಯ ಸಭೆಯಲ್ಲಿ ಮಾತನಾಡಿ, ಪಡಿತರ ವಿತರಣೆ ಸಂಬಂಧ ನೋಡಲ್ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅವರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಆಹಾರ ಖಾತ್ರಿ ಯೋಜನೆಯಲ್ಲಿ 1-10ನೇ ತಾರೀಖಿನವರೆಗೆ ಕಡ್ಡಾಯವಾಗಿ ಆಹಾರ ವಿತರಣೆಯಾಗಬೇಕು. ಮಂಗಳವಾರ ಹೊರತುಪಡಿಸಿ 11ರಿಂದ 30ರವರೆಗೂ ಪಡಿತರ ನೀಡ, ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಪ್ರತಿ ತಿಂಗಳು 7ರಂದು ನೋಡಲ್ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡುತ್ತಾರೆ ಮತ್ತು ಕಾರ್ಡುದಾರರೊಂದಿಗೆ ಆಹಾರ ಹಂಚಿಕೆ ಬಗ್ಗೆ ಆಹಾರ ಆದಾಲತ್ ನಡೆಸುವರು ಎಂದು ತಿಳಿಸಿದರು. ಶಿರಸ್ತೇದಾರ ರವಿಕುಮಾರ, ಪಡಿತರ ಅಂಗಡಿಗಳ ಡೀಲರ್ಗಳು ಸಭೆಯಲ್ಲಿ ಭಾಗವಹಿಸಿದ್ದರು.