ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೊನ್ನಶ್ರೀಗೆ ಗೌರವ ಡಾಕ್ಟರೇಟ್; ಅಧಿಕೃತ ಆಹ್ವಾನ

Mainashree
Updated On : 18 Feb 2014, 11:48 am

ಜೇವರ್ಗಿ: ತಾಲೂಕಿನ ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರು ಕಳೆದ ಎರಡು ದಶಕಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಿದೆ.
ಫೆ.20ರಂದು ಬೆಳಿಗ್ಗೆ ಗುವಿವಿ ಜ್ಞಾನ ಗಂಗಾ ಆವರಣದಲ್ಲಿ ಆಯೋಜಿಸಲಾದ 32ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಶಿವಾನಂದ ಸ್ವಾಮೀಜಿ ಅವರಿಗೆ ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರ ಡಾ. ಆರ್.ಚಿದಂಬರಂ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ, ಕುಲಸಚಿವ ಪ್ರೊ. ಚಂದ್ರಕಾಂತ ಯಾತನೂರ ಮತ್ತಿತರರು ಭಾಗವಹಿಸಲಿದ್ದಾರೆಂದು ವಿವಿ ಪರವಾಗಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಪೂಜಾರ್ ಅವರೇ ಖುದ್ದು ಮಠಕ್ಕೆ ಬಂದು ಆಹ್ವಾನ ಪತ್ರ ನೀಡಿದ್ದಾರೆ.
ಶ್ರೀಗಳ ಪರಿಚಯ: ತಾಲೂಕಿನ ಸೊನ್ನ ಗ್ರಾಮದ ಶರಣ ದಂಪತಿಗಳಾದ ಶರಣಮ್ಮ ಶಾಂತಯ್ಯ ಅವರ ಉದರದಲ್ಲಿ ಜೂನ್ 1- 1963ರಲ್ಲಿ ಜನಿಸಿದರು. ಮೇ. 19.1997ರಲ್ಲಿ ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿಯಾಗಿ ಮಠದ ಕಾರ್ಯಭಾರ ವಹಿಸಿಕೊಂಡರು.
ಪೂಜ್ಯರು ಹುಬ್ಬಳ್ಳಿಯ ಶಿವಯೋಗ ಮಂದಿರದಲ್ಲಿ ಪದವಿ ಹಾಗೂ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಶಿವಾನಂದ ಸ್ವಾಮೀಜಿ ಅವರು ಅನ್ನದಾಸೋಹ, ಜ್ಞಾನ ದಾಸೋಹ, ಶೈಕ್ಷಣಿಕ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ತ್ರಿವಿಧ ದಾಸೋಹಕ್ಕೆ ಹೆಸರಾದ ಸೊನ್ನ ಮಠದ ಕೀರ್ತಿಯನ್ನು ನಾಡಿನಾದ್ಯಂತ ಹರಡಿಸಿದ ಖ್ಯಾತಿ ಶ್ರೀಗಳಿಗೆ ಸಲ್ಲುತ್ತದೆ.
ಅಧಿಕೃತ ಆಹ್ವಾನ: ಘಟಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸುವಂತೆ ಸಂಸ್ಥೆಯ ಮುಖ್ಯಸ್ಥ ಪ್ರೊ. ಪೂಜಾರ್ ಅವರು ಭಾನುವಾರ ಸೊನ್ನದ ಶ್ರೀಮಠಕ್ಕೆ ಭೇಟಿ ನೀಡಿ ಶಿವಾನಂದ ಸ್ವಾಮೀಜಿ ಅವರಿಗೆ ಅಧಿಕೃತ ಆಹ್ವಾನ ಪತ್ರವನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement