ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೌಲ್ಯ ಕಳೆದುಕೊಂಡ ಜ್ಞಾನಗಂಗೆ ಗೌಡಾ: ಕಾಂತಾ

Vishwanath S
Updated On : 19 Feb 2014, 11:14 am

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗೆ ಸಾಧಕರನ್ನು ಆಯ್ಕೆ ಮಾಡುವಲ್ಲಿ ಸೂಕ್ತ ಮಾನದಂಡ ಅನುಸರಿಸದೆ ಎಡವುತ್ತಿದೆ, ಇದರಿಂದಾಗಿ ಜ್ಞಾನಗಂಗೆಯ ಗೌಡಾಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ಖೇದ ವ್ಯಕ್ತಪಡಿಸಿರುವ ಮಾಜಿ ಸಚಿವ, ಜನಪರ ಹೋರಾಟಗಾರ ಎಸ್.ಕೆ. ಕಾಂತಾ ಈ ಬಾರಿಯ ಘಟಿಕೋತ್ಸವದಲ್ಲಿ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ 12 ಸಾಧಕರಿಗೆ ಗೌಡಾ ನೀಡಲು ವಿವಿ ಹೊರಹಟಂತಹ ಕ್ರಮದ ಬಗ್ಗೆ ತೀವ್ರ ಬೇಸರ ಹೊರಹಾಕಿದ್ದಾರೆ. ಸಾಧಕರನ್ನು ಗುರುತಿಸುವಲ್ಲಿ ಯಾವುದೇ ಮಾನದಂಡಗಳು ವಿವಿ ಬಳಿ ಇಲ್ಲ. ಕುಲಪತಿಗಳು ತಮ್ಮ ಮೂಗಿನ ನೇರಕ್ಕೆ ಸಾಧಕರನ್ನು ಗುರುತಿಸಿ ಗೌಡಾ ನೀಡುತ್ತಿದ್ದಾರೆ. ಈ ಪ್ರಕ್ರಿಯೆಯೇ ಸರಿಯಾಗಿಲ್ಲ ಎಂದು ಕಾಂತಾ ಅಭಿಪ್ರಾಯಪಟ್ಟಿದ್ದಾರೆ.
ಅಕ್ರಮಗಳ ಸರಣಿ: 32ನೇ ವಾರ್ಷಿಕ ಘಟಿಕೋತ್ಸವದಲ್ಲಿಯೂ ಅಧಿಕಾರದಲ್ಲಿರುವವರಿಗೆ ಪ್ರಶಸ್ತಿ ನೀಡುವ ಪದ್ಧತಿ ಮುಂದುವರಿದಿದೆ. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ಗೌಡಾ ನೀಡಲಾಗುತ್ತಿದೆ. ಇವರ ಹೆಸರು ವಕ್ಫ್ ಭೂಮಿ ಕಬಳಿಕೆಯಲ್ಲಿ ಪ್ರಸ್ತಾಪವಾಗಿತ್ತು. ಇದಲ್ಲದೆ ಅನೇಕ ಭೂಮಿ ಅತಿಕ್ರಮಣ, ಪರಭಾರೆ  ಪ್ರಕರಣಗಳಲ್ಲಿಯೂ ಇವರ ಹೆಸರು ಢಾಳವಾಗಿದ್ದರೂ, ವಿವಿ ಇಂತಹವರಿಗೇ ಗೌಡಾ ನೀಡುತ್ತಿರುವುದು ಅದೆಷ್ಟು ಸಮಂಜಸ ಎಂದು ಕಾಂತಾ ಖಾರವಾಗಿ ಪ್ರಸ್ನಿಸಿದ್ದಾರೆ.
ಆಯ್ಕೆ ಉತ್ತಮವಾಗಿರಬೇಕಾಗಿತ್ತು: ಈ ಕುರಿತಂತೆ ಕನ್ನಡಪ್ರಭ ಜೊತೆ ಮಾತನಾಡಿರುವ ಕಾಂತಾ, ವಿವಿ ಗೌಡಾಕ್ಕೆ ಅದರದ್ದೇ ಆದ ಘನತೆ ಇರಬೇಕಿತ್ತು. ಆದರೆ ವಿವಿಯ ಸಡಿಲ ಆಯ್ಕೆ ನೀತಿಯಿಂದಾಗಿ ಗೌರವ ಡಾಕ್ಟರೇಟ್ ತಮ್ಮ ಘನತೆ ಕಳೆದುಕೊಂಡಿವೆ ಎಂದೂ ಅಸಮಾಧಾನ ಹೊರಹಾಕಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆ ಸಾಧಕರ ಗುರುತಿಸುವ ಪದ್ಧತಿ ಹೀಗಿರಬಾರದು. ತಜ್ಞರ ಸಮಿತಿ ಮಾಡಿ, ಅದರಡಿಯಲ್ಲಿ ಸಾಧಕರ ಸಾಧನೆಗಳನ್ನು ಭೂತಗನ್ನಡಿಯಲ್ಲಿ ನೋಡಿ, ಅಳೆದು ಸುರಿದು ಪುರಸ್ಕಾರಕ್ಕೆ ಆಯ್ಕೆ ಮಾಡಬೇಕೇ ವಿನಃ ಯಾರದೋ ವೈಯಕ್ತಿಕ ಹಿತಾಸಕ್ತಿಗಳಂತೆ ಗೌಡಾಕ್ಕೆ ಆಯ್ಕೆಗಳು ನಡೆಯಬಾರದು ಎಂದು ಕಾಂತಾ ಹೇಳಿದ್ದಾರೆ.
ಗುಲ್ಬರ್ಗ ವಿವಿ 32ನೇ ವಾರ್ಷಿಕ ಘಟಿಕೋತ್ಸವದಲ್ಲಿ 12 ಜನರಿಗೆ ಗೌಡಾ ನೀಡಲು ಮುಂದಾಗಿದೆ. ಸಚಿವ ಇಸ್ಲಾಂ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೀರಿ, ಇತರೆ ಆಯ್ಕೆಗಳು ಹೇಗಿವೆ ಎಂಬ ಪ್ರಶ್ನೆಗೆ ಕಾಂತಾ ಯಾವುದೇ ಉತ್ತರ ನೀಡದೆ ಗೌಡಾ ವಿಚಾರದಲ್ಲಿ, ಆ ಪುರಸ್ಕಾರ ಪಟ್ಟಿಯ ಬಗ್ಗೆಯಾಗಲಿ ಹೆಚ್ಚಿಗೆ ಹೇಳುವುದು ಏನೂ ಇಲ್ಲ ಎಂದು ಕಾಂತಾ ಹೇಳುವ ಮೂಲಕ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ವಿಚಾರದಲ್ಲಿ ಹೇಳಿಕೆ ನೀಡುವುದಕ್ಕಿಂತ ಮೌನವಾಗಿರುವುದೇ ಹೆಚ್ಚು ಜಾಣತನ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಖಮರುಲ್‌ಗೆ ಗೌಡಾ: ಖಂಡನೆ
ಗುಲ್ಬರ್ಗ: ಅಧಿಕಾರದಲ್ಲಿರುವ ಮಂತ್ರಿ ಖಮರುಲ್ ಇಸ್ಲಾಂ ಅವರಿಗೆ ಗಾರವ ಡಾಕ್ಟರೇಟ್ ನೀಡಲು ಮುಂದಾಗಿರುವ ಗುವಿವಿ ಬೆಳವಣಿಗೆಯನ್ನು ಯುವ ಮುಖಂಡ ನಾಸೀರ್ ಹುಸೇನ್, ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಖಂಡಿಸಿದ್ದಾರೆ.
ವಕ್ಫ್ ಆಸ್ತಿಪಾಸ್ತಿ ಕಬಳಿಕೆಯಲ್ಲಿ ಸಚಿವ ಇಸ್ಲಾಂ ಹೆಸರಿದೆ. ಜೊತೆಗೆ ಅನೇಕ ಸ್ಥಳೀಯ ಭೂ ಕಬಳಿಕೆಯಲ್ಲಿಯೂ ಹೆಸರಿದೆ. ಇಂತಹವರಿಗೆ ವಿವಿಯಂತಹ ಉನ್ನತ ಸಂಸ್ಥೆ ಗೌಡಾ ನೀಡುತ್ತಿರುವುದು ಯಾವ ಪುರುಷಾರ್ಥಕ್ಕೆ, ಸುಳ್ಳು ಹೇಳಿ ಜನರನ್ನು ಯಾಮಾರಿಸುವ, ವಕ್ಫ್ ಆಸ್ತಿ ಕಬಳಿಕೆಯಲ್ಲಿರುವುದೇ ಇವರ ಸಾಧನೆ ಎಂದು ವಿವಿ ಗೌಡಾ ನೀಡುತ್ತಿದೆಯೇ ಎಂದು ಇವರು ಪ್ರಶ್ನಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement