'ಸಿಎಂ ಸಿದ್ದರಾಮಯ್ಯ ಬಜೆಟ್ ಜನವಿರೋಧಿ'
ಗುರುಮಠಕಲ್: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 2014-15ನೇ ಸಾಲಿನ ಬಜೆಟ್, ಜನಪರ ಬಜೆಟ್ ಹೆಸರಿನ ಸೋಗಿನಲ್ಲಿ ಹಲವು ಸತ್ಯಗಳನ್ನು ಮರೆಮಾಚಲಾಗಿರುವ ಬಜೆಟ್ ಆಗಿದೆ. ಇದು ಅತ್ಯಂತ ಅಪಾಯಕಾರಿ ಜನವಿರೋಧಿ ಬಜೆಟ್ ಎಂದು ಎಸ್ಯುಸಿಐ(ಸಿ) ರಾಜ್ಯ ಸಮಿತಿಯ ಸೋಮಶೇಖರ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಹಲವು ರೀತಿಯ ಪ್ರಶಂಸೆಗಳು ಅಥವಾ ಟೀಕೆಗಳಿಂದ ಬಜೆಟ್ ಬಗ್ಗೆ ಇರುವ ಗೊಂದಲಗಳು ನಿವಾರಣೆಯಾಗದೆ ಜಟಿಲಗೊಳ್ಳುತ್ತಿವೆ. ಮೂಲಭೂತವಾಗಿ ಸರ್ಕಾರ ಕ್ರೋಢಿಕರಿಸಬೇಕಿದ್ದ ಸಂಪನ್ಮೂಲಗಳ ಕೊರತೆ ಎದ್ದು ಕಾಣುತ್ತಿದ್ದು, ಬಂಡವಾಳಗಾರರಿಗೆ ಧಾರಾಳವಾಗಿ ರಿಯಾಯಿತಿಗಳನ್ನು ನೀಡಿರುವುದೇ ಇದಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೇ ಈ ಹಿಂದೆ ಸಿದ್ಧರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ಬಲವಾಗಿ ವಿರೋಧಿಸುತ್ತಿದ್ದ ಹೊರಗಿನ ಸಾಲದ ಬಾಧೆ ಸ್ವತಃ ಇವರನ್ನೂ ಬಾಧಿಸದೆ ಬಿಟ್ಟಿಲ್ಲ. ರು. 25 ಸಾವಿರ ಕೋಟಿಗಳಷ್ಟು ಹೆಚ್ಚುವರಿ ಸಾಲದ ನಿರೀಕ್ಷೆಯೊಂದಿಗೆ ಹುಸಿ ಅಭಿವೃದ್ಧಿ ಘೋಷಣೆಗಳನ್ನು ಮಾಡಲಾಗಿದೆ ಎಂದು ದೂರಿದರು.
ಕಳೆದ 4 ತ್ರೈಮಾಸಿಕಗಳಲ್ಲಿ ಬಜೆಟ್ ಹೊರತಾಗಿ ಸುಮಾರು ರು. 900 ಕೋಟಿಗಳಷ್ಟು ಭಾರಿ ಮೊತ್ತದ ತೆರಿಗೆ ರಿಯಾಯತಿಗಳನ್ನು ದೊಡ್ಡ ಬಂಡವಾಳಗಾರರಿಗೆ ದಯಪಾಲಿಸಲಾಗಿದೆ. ಇದರಿಂದ ಉಂಟಾದ ವಿತ್ತೀಯ ಕೊರತೆಯನ್ನು ಯಾವ ಮೂಲದಿಂದ ಸರ್ಕಾರ ಸಂಗ್ರಹಿಸುತ್ತದೆ ಎಂಬುದನ್ನು ಬಹಿರಂಗ ಪಡಿಸಿಲ್ಲ.
ಅಂತಿಮವಾಗಿ ಅಘೋಷಿತ ತೆರಿಗೆಗಳು ಜನರ ಮೇಲಿನ ಭಾರವನ್ನು ಹೆಚ್ಚಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಈಗಾಗಲೇ ದುಬಾರಿ ಜೀವನ ವೆಚ್ಚದಿಂದ ತತ್ತರಿಸುತ್ತಿರುವ ಜನತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಎಂದು ಅವರು ಟೀಕಿಸಿದ್ದಾರೆ.