23ರಿಂದ ಪಲ್ಸ್ ಪೋಲಿಯೊ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಾದಗಿರಿ ಫೆ.19
ಜಿಲ್ಲಾದ್ಯಂತ ಫೆ.23ರಿಂದ 26ರವರೆಗೆ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೊ ಲಸಿಕೆಯಿಂದ ವಂಚಿತ ಆಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ ಜಿಲಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮದ ಕುರಿತು ನಡೆದ ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಪ್ರತಿಯೊಂದು ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಬೇಕು. ಈ ಕಾರ್ಯಕ್ರಮಕ್ಕೆ ಅಡತಡೆಯಾಗದಂತೆ ನೋಡಿಕೊಳ್ಳಲು ಸಮರ್ಪಕ ವಿದ್ಯುತ್, ವಾಹನಗಳ ಸೌಲಭ್ಯ, ಪೋಲಿಸ್ ನೆರವು, ಅವಶ್ಯಕ ಸಿಬ್ಬಂದಿ ಮತ್ತು ತಂಡಗಳ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಣೆಯಾದರೂ ಕೂಡ ಪೋಲಿಯೊ ವೈರಸ್ ಈ ದೇಶಕ್ಕೆ ಮತ್ತೊಮ್ಮೆ ಬಾರದಂತೆ ನೋಡಿಕೊಳ್ಳುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೋಲಿಯೊ ಕಾರ್ಯಕ್ರಮದ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಅದರಂತೆ ಈ ಪೋಲಿಯೊ ಕಾರ್ಯಕ್ರಮದಲ್ಲಿ ಶೇ.100ರಷ್ಟು ಸಾಧನೆ ಮಾಡಿದ ಸಿಬ್ಬಂದಿಗೆ ವೈಯಕ್ತಿಕ ಮತ್ತು ತಂಡಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಸಹ ನೀಡಲು ನಿರ್ಧರಿಸಲಾಗಿದೆ. ಪಾಲಕರು ಸಹ ನಿರ್ಲಕ್ಶ್ಯ ತೋರದೆ ತಮ್ಮ ಮಗುವಿಗೆ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಲು ಅವರು ಕೋರಿದರು.
ಈ 2ನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ 1,47,579 ಮತ್ತು ನಗರ ಪ್ರದೇಶದ 39,194 ಸೇರಿದಂತೆ 1,86,773 ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಒಟ್ಟು 2,13,597 ಮನೆಗಳಿಗೆ ಭೇಟಿ ನೀಡಿ ತಂಡಗಳು ಲಸಿಕೆ ಹಾಕಲಿವೆ. 631 ಲಸಿಕ ಬೂತ್ ಸ್ಥಾಪಿಸಲು ಉದ್ದೇಶಿಸಿದ್ದು, 39 ಟ್ರಾನ್ಸಿಟ್ ತಂಡಗಳು, ಮೊಬೈಲ್ ತಂಡಗಳು, ಹೀಗೆ ಒಟ್ಟು 677 ತಂಡ ಸ್ಥಾಪಿಸಲು ಉದ್ದೇಶಿಸಿದೆ. ಒಟ್ಟು 1,354 ಲಸಿಕೆ ಹಾಕುವವರನ್ನು ಹಾಗೂ 138 ಮೇಲ್ವಿಚಾರಕರನ್ನು ನಿಯೋಜಿಸಲು ಉದ್ದೇಶಿಸಿದೆ.