ಕಾಲುವೆ ನೀರಿಗಾಗಿ ರೈತರ ಜಾಗೃತಿ ಸಭೆ
ಕ.ಪ್ರ. ವಾರ್ತೆ , ಶಹಾಪುರ , ಫೆ.19
ಶಹಾಪುರ ತಾಲೂಕಿನ ವಡಗೇರಾದಲ್ಲಿ ಕಾಲುವೆ ನೀರಿಗಾಗಿ ರೈತರಲ್ಲಿ ಜಾಗೃತಿ ಮೂಡಿಸಲು ಹಾಗೂ ನೀರಿಗಾಗಿ ಹೋರಾಟಗಳ ಬಗ್ಗೆ ಕಾಲುವೆ ಕೊನೆಯಂಚಿನ ರೈತರಿಗೆ ಮಾಹಿತಿ ನೀಡುವ ಸಲುವಾಗಿ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ರೈತ ಹೋರಾಟಗಾರ ಭಾಸ್ಕರರಾವ್ ಮಡಬೂಳ ಮಾತನಾಡಿ, ಕಾಲುವೆಗಳು ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ, ಕಾಲುವೆ ಕೊನೆಯಂಚಿನ ವಡಗೇರಾ ಹೋಬಳಿ ಭಾಗದ ಅನೇಕ ಗ್ರಾಮಗಳ ರೈತರು ತಮ್ಮ ಭೂಮಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಲುವೆಗಳಿದ್ದರೂ, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ ಎಂದು ಕಿಡಿಕಾರಿದರು.
ಕೋಟಿಗಟ್ಟಲೆ ಅನುದಾನ: ರೈತರ ನೀರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೆಬಿಜೆಎನ್ಎಲ್ಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದರೂ, ರೈತರಿಗೆ ನೀರು ಸಿಗುತ್ತಿಲ್ಲ ಎಂದರು. ನೀರಿಗಾಗಿ ಹೋರಾಟ ಮಾಡುವ ಮೂಲಕ ಕಾಲುವೆ ಕೊನೆಯಂಚಿನ ನೂರಾರು ರೈತರು ಹೋರಾಟಕ್ಕೆ ಮುಂದಾದರೆ ಕಾಲುವೆ ನೀರು ಬರುವುದು ಖಂಡಿತ ಎಂದು ಹೇಳಿದರು.
ವಡಗೇರಾದ ಪ್ರಗತಿಪರ ರೈತ ಹಾಗೂ ರೈತ ಹೋರಾಟಗಾರ ಬಾಶುಮಿಯಾ ವಡಗೇರಾ ಮಾತನಾಡಿ, ವಡಗೇರಾ ಭಾಗದಲ್ಲಿ ಕಾಲುವೆಗಳಿದ್ದರೂ ರೈತರು ನೀರಾವರಿಯಿಂದ ವಂಚಿತಗೊಂಡಿದ್ದಾರೆ. ಪ್ರತಿವರ್ಷ ರೈತರ ಬೆಳೆಗಳಿಗೆ ನೀರು ಇಲ್ಲದೆ ಬೆಳೆಗಳು ಒಣಗಿ ಮಣ್ಣು ಪಾಲಾಗುತ್ತಿವೆ. ಇದರಿಂದ ರೈತರು ನಷ್ಟಕ್ಕೀಡಾಗಿ, ಸಾಲ-ಸೋಲಕ್ಕೆ ತುತ್ತಾಗಿ ಗುಳೆ ಹೋಗುವುದು ತಪ್ಪುತ್ತಿತ್ತ ಎಂದರು.
ರೈತರಾದ ಚಂದ್ರಶೇಖರ ನಾಯ್ಕಲ್, ಸಿದ್ದಪ್ಪ ಕಡೆಚೂರ, ವೆಂಕಟಿ ಸಾಳೇರ್, ಗ್ರಾಪಂ ಸದಸ್ಯ ಉಮಾಪತಿ, ಹಣಮಂತಿ ಓಡಕಾರ್, ಕಲ್ಲಪ್ಪ ಕಲ್ಲಪ್ಪನೋರ್, ಭೀಮರಾಯ ತುಯ್ಯಾ, ಅಮಾತೆಪ್ಪ, ವಡಗೇರಾ ಭಾಗದ ನೂರಾರು ರೈತರು ಭಾಗವಹಿಸಿದ್ದರು.