ಸಚಿವ ಖಮರುಲ್‌ಗೆ 'ಗೌಡಾ': ತಡೆಯಾಜ್ಞೆಗೆ ಕಾಂತಾ ಒತ್ತಾಯ
ಗುಲ್ಬರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿರುವ ಖಮರುಲ್ ಇಸ್ಲಾಂ ಅವರಿಗೆ ನೀಡಲಿರುವ 'ಗೌಡಾ' ತಡೆಯಾಜ್ಞೆಗೆ ಮಾಜಿ ಸಚಿವ, ಹೋರಾಟಗಾರ ಎಸ್.ಕೆ. ಕಾಂತಾ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಿಗೆ ಆಗ್ರಹಿಸಿದ್ದಾರೆ.
ಸಚಿವರ ವಿರುದ್ಧ ಲೋಕಾಯುಕ್ತ, ವಕ್ಫ್ ಆಸ್ತಿ ಅತಿಕ್ರಮಣದ ಪ್ರಕರಣ ಹಾಗೂ ಕಾನೂನು ಕಟ್ಟಳೆ ಉಲ್ಲಂಘಿಸಿ ಪತ್ನಿ ಹೆಸರಲ್ಲಿ ಭೂಮಿ ಖರೀದಿಸಿರುವ ಆರೋಪಗಳೂ ಇವೆ. ಇವರಿಗೆ ಗುವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ದಾಖಲೆಗಳ ಸಮೇತ ರಾಜ್ಯಪಾಲರ ಕಚೇರಿಗೆ ಮಂಗಳವಾರ ಫ್ಯಾಕ್ಸ್ ಸಂದೇಶ ರವಾನಿಸಿರುವ ಕಾಂತಾ, ಅದನ್ನು ಪತ್ರಿಕೆಗಳಿಗೂ ಬಿಡುಗಡೆ ಮಾಡಿದ್ದಾರೆ.
ಇಸ್ಲಾಂ ಅವರು ವೆಂಕಟಬೇನೂರಲ್ಲಿ ಭೂಸುಧಾರಣೆ ಕಾಯ್ದೆ ಕಲಂ ಉಲ್ಲಂಘಿಸಿ ಜಮೀನು ಖರೀದಿಸಿರುವ ಪ್ರಕರಣ ವಿಚಾರಣೆ ಹಂತದಲ್ಲಿದೆ. ಕಂದಾಯ ಇಲಾಖೆಯಲ್ಲಿ ಸಹಾಯಕ ಆಯುಕ್ತರು ಕಾನೂನು ಉಲ್ಲಂಘನೆಯಾಗಿದೆ ಎಂದು ವರದಿ ನೀಡಿದ್ದು ಗುಲ್ಬರ್ಗ ತಹಸೀಲ್ದಾರರಿಗೆ ಈ ಬಗ್ಗೆ ಸೂಚಿಸಿ ಸದರಿ ಭೂಮಿ ವಶಕ್ಕೆ ಸೂಚಿದ್ದಾರೆ. ಈ ಪ್ರಕರಣ ಕಂದಾಯ ಇಲಾಖೆಯಲ್ಲಿದೆ. ಜೊತೆಗೇ ಸರ್ವೆ ನಂಬರ್ 12ರ ಬಡೇಪುರ ಗ್ರಾಮದ ಜಮೀನಿನಲ್ಲಿ ನಿವೇಶನ ಮಾಡಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇದೆಲ್ಲವೂ ಅಕ್ರಮವೆಂದು ಪ್ರಕರಣ ದಾಖಲಾಗಿದೆ ಎಂದು ದಾಖಲೆಗಳ ಸಮೇತ ಮಾಹಿತಿ ನೀಡಿ ರಾಜ್ಯಪಾಲರ ಗಮನ ಸೆಳೆದಿದ್ದಾರೆ.