ಸಾಕ್ಷರ ಭಾರತ ಪ್ರೇರಕರ ಮಾಸಿಕ ಸಭೆ ಬಹಿಷ್ಕಾರ
ಆಳಂದ: ಪ್ರೇರಕರ ಗೌರವಧನ ಬಿಡುಗಡೆ ಆಗದಿದ್ದಕ್ಕೆ ಸಾಕ್ಷರ ಭಾರತ ಪ್ರೇರಕರ ಮಾಸಿಕ ಸಭೆಯನ್ನು ತಾಲೂಕು ಪ್ರೇರಕರ ಒಕ್ಕೂಟದ ಪದಾಧಿಕಾರಿಗಳು ಸಭೆ ಬಹಿಷ್ಕರಿಸಿ ಹೊರಬಂದ ಘಟನೆ ನಡೆದಿದೆ.
ಸಭೆಯಲ್ಲಿ ಹಾಜರಿದ್ದ ತಾಲೂಕು ಪ್ರೇರಕರ ಒಕ್ಕೂಟದ ಅಧ್ಯಕ್ಷ ಶಿವಲಿಂಗ ಎಸ್. ತೇಲ್ಕರ ಮಾತನಾಡಿ, ಈ ಕಾರ್ಯಕ್ರಮ ಪ್ರಾರಂಭದಿಂದಲೂ ತಾಲೂಕಿನ 39 ಗ್ರಾಪಂ ಮಟ್ಟದಲ್ಲಿ ಪ್ರೇರಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕಳೆದ 18 ತಿಂಗಳಿಂದ ಗೌರವಧನ ನೀಡಿಲ್ಲ. ಗೌರವಧನ ಬಿಡುಗಡೆಗಾಗಿ ಸಚಿವರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒಂದು ವಾರ ಗಡುವು ನೀಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಮಾರ್ಚ್ 9ರಂದು ನಡೆಯುವ ನವ ಸಾಕ್ಷರ ಮೌಲ್ಯಮಾಪನ ಹಾಗೂ ಕಲಿಕಾ ಕೇಂದ್ರಗಳು ಸ್ಥಗಿತಗೊಳಿಸಲಾಗುವುದು ಎಂದಾಗ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ರಾಮನ್, ಉಪಾಧ್ಯಕ್ಷ ಚಂದ್ರಕಾಂತ ನರೋಣೆ, ಜಯಕಾಂತ ವಾಗ್ಮೋರೆ, ಸಂಜಯಕುಮಾರ ಘತ್ತರಗಿ, ಶಶಿಕಲಾ ನಿಂಬರ್ಗಾ, ಮಹಾದೇವ ಸಂಗಾವಿ, ಸವಿತಾ ತಡಕಲ್, ಸೋನುಬಾಯಿ ಜಮಾದಾರ ಅವರು ತೇಲ್ಕರ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸಭೆ ಭಹಿಷ್ಕರಿಸಿ ಸಭೆಯಿಂದ ಹೊರಬಂದರು.
ಸಂಯೋಜಕ ಕಂಬಾರ ಪ್ರೇರಕರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸಭೆಯಲ್ಲಿ ಗುರುಶಾಂತ ಬಾವಿಮನಿ, ಶಾಂತಮಲ್ಲ ಕೆರೂರ, ಶಿವಾನಂದ ಘಂಟೆ, ಗೌತಮ ಕಾಂಬಳೆ, ಗುರುಶರಣ ಜವಳಿ, ಹಾಜಪ್ಪ ತಮ್ಮನ್ ಸೇರಿದಂತೆ ಪ್ರೇರಕರು ಹಾಜರಿದ್ದರು ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.