ಮಳೆ ನೀರು ಸಂರಕ್ಷಿಸಿ
ಆಳಂದ: ಮಳೆ ನೀರು ವ್ಯರ್ಥವಾಗಿ ಹಳ್ಳ, ಕೊಳ್ಳಗಳ ಮೂಲಕ ನದಿ ಸೇರುತ್ತಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಇಂತಹ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಮಳೆ ನೀರು ಸಂಗ್ರಹಕ್ಕೆ ಮುಂದಾಗಲು ಜನಜಾಗೃತಿ ಅಗತ್ಯ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಪಟ್ಟಣದ ಶರಣ ಏಕಾಂತ ರಾಮಯ್ಯನ ಮಂದಿರದಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಮತಾ ಲೋಕ ಶಿಕ್ಷಣ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ ಅಂತರ್ಜಲ ಸದ್ಬಳಕೆ ಮತ್ತು ಮಳೆ ನೀರು ಸಂರಕ್ಷಣೆ ಕುರಿತು ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ್ಜಲ ವೃದ್ಧಿಗೆ ಮುಂದಾಗಿ: ಪ್ರಕೃತಿ ವಿಕೋಪದಿಂದ ಒಮ್ಮೆ ಜೋರಾಗಿ ಬರುವ ಮಳೆ ಜಮೀನುಗಳನ್ನು ಅಲ್ಲೊಕಲ್ಲೋಲ ಮಾಡುತ್ತದೆ. ಇನ್ನೊಮ್ಮೆ ಬರಗಾಲ ತಲೆದೋರಿ ತಳಮಳ ಹುಟ್ಟಿಸುತ್ತದೆ. ಇಂಥ ಸ್ಥಿತಿ ತಡೆಯಲು ಹರಿಯುವ ನೀರಿಗೆ ಕೆರೆ, ಕಟ್ಟೆ, ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ಸಂಗ್ರಹ ಮಾಡಿ ಕುಸಿಯುತ್ತಿರುವ ಜಲ ಉಳಿಸಲು ಜನರಲ್ಲಿ ಅರಿವು ಯುದ್ಧೋಪಾದಾಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಜಲಾನಯನ ಇಲಾಖೆಯ ಕೆ.ರಾಘವೇಂದ್ರ, ಬಳ್ಳಾರಿಯ ವಿಷಯ ತಜ್ಞ ಡಾ. ಲಕ್ಕಿ ಪೃಥ್ವಿರಾಜ, ರಾಚಮ್ಮ ಮಂಚಾರೆ, ಗಣಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುಕುಂದಪ್ಪ ಮಳೆ ನೀರು ಸಂಗ್ರಹ ಕುರಿತು ಉಪನ್ಯಾಸ ನೀಡಿದರು.
ತಾಪಂ ಅಧ್ಯಕ್ಷೆ ಪ್ರಭಾವತಿ ಢಗೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಮಂಗಲಾ ನರೋಣಿ, ಮುಖಂಡ ಗುರುಶರಣ ಪಾಟೀಲ ಕೋರಳ್ಳಿ, ಹಿಂದುಳಿದ ವರ್ಗಗಳ ವೇದಿಕೆಯ ತಾಲೂಕಾಧ್ಯಕ್ಷ ಮಲ್ಲಿನಾಥ ಪರೇಣಿ, ಕೆಜೆಪಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಶ್ರೀಶೈಲ ರೆಡ್ಡಿ, ಆನಂದರಾವ ಕಂಠೆಕೋರೆ, ಮೌಲಾ ಪಟೇಲ, ಸೋಮನಾಥ ಪಾಟೀಲ, ಮಲ್ಲಿನಾಥ ಯಲಶೆಟ್ಟಿ, ಕಾಶಿನಾಥ ಬಿರಾದಾರ, ಮಹಿಬೂಬ ಫಣಿಬಂಧ, ಸೇರಿಂದತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.