ಯೋಜನೆಗಳ ಸದುಪಯೋಗದಿಂದ ಸ್ವಾವಲಂಬಿಗಳಾಗಿ: ಮಹಮ್ಮದ್
ಯಾದಗಿರಿ: ಅಂಗವಿಕಲರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕೆಂದು ನಗರಸಭೆ ಅಧ್ಯಕ್ಷ ಮಹ್ಮದ್ ಇಸಾಕ ಹೇಳಿದರು.
ನಗರಸಭೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ 2011-12ನೇ ಸಾಲಿನ ಶೇ. 22.75 ಮತ್ತು ಶೇ.7.25 ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಸ್ಕೂಟರ್ ವಿತರಿಸಿ ಮಾತನಾಡಿ, ಸಂವಿಧಾನ ಅಂಗವಿಕಲರಿಗೆ ಸಮಾನವಾದ ಹಕ್ಕನ್ನು ಕೊಟ್ಟಿದ್ದು, ಸರ್ಕಾರ ವಿಶೇಷ ಸವಲತ್ತು ನೀಡುತ್ತಿದೆ. ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆಯು ಅಂಗವಿಲಕರಿಗೆ ಸ್ಕೂಟರ್ ವಿತರಣೆ ಮಾಡುತ್ತಿದ್ದು, ಇದರ ಸದುಪಯೋಗವನ್ನು ಪಡೆದು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕೆಂದರು.
ನಗರಸಭೆ ಆಯುಕ್ತ ಖಾಜಾ ಮೈನೋದ್ದಿನ್ ಮಾತನಾಡಿ, ಅಂಗವಿಕಲರು ಶಾಪಗ್ರಸ್ತರಲ್ಲ. ಅವರೂ ಸಮಾಜದ ಮುಖ್ಯವಾಹಿನಿಯಲ್ಲಿ ಬಾಳುವಂತಾಗಲು ನೆರವಾಗಬೇಕು. ಅಂಗವಿಕಲರಿಗೆ ಸಹಾಯ ಹಸ್ತ ನೀಡಿದರೆ, ಎಲ್ಲರಂತೆ ಅವರೂ ಏನು ಬೇಕಾದರೂ ಸಾಧಿಸಬಲ್ಲರು ಎಂದರು. ಕಾರ್ಯಕ್ರಮದಲ್ಲಿ ರಾಜಮ್ಮ ಮೌಲಾಲಿ ಅನಪುರ, ಲಲಿತಾ ಅನಪುರ, ಶೇಖ ಜಕಿಯೋದ್ದಿನ್, ಅನ್ನಪೂರ್ಣ ಆಂಜಲಿ, ಹಣಮಂತ, ನಾರಾಯಣ, ಮೋಹನ ರೆಡ್ಡಿ ಮತ್ತಿತರರು ಇದ್ದರು.