ಆವರ್ತ ನಿಧಿಗೆ ಹಣ ಸಂಗ್ರಹ ಕೈಬಿಡಿ
ಗುಲ್ಬರ್ಗ: ಇಲ್ಲಿನ ಗಂಜ್ ಪ್ರದೇಶದಲ್ಲಿರುವ ಹಾರ ಧಾನ್ಯ- ಬೀಜ ವರ್ತಕರ ಸಂಘ ತನ್ನ ಸಂಸ್ಥಾಪನೆಯ 75ನೇ ವರ್ಷಾಚರಣೆಯನ್ನು ಅಮೃತ ಮಹೋತ್ಸವ ರೂಪದಲ್ಲಿ ಆಚರಿಸಲು ಸಿದ್ಧವಾಗಿದ್ದು, ಅದಕ್ಕಾಗಿ ಫೆ. 22ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರಂಗವಾಗಿ ಗಂಜದ ಗಂಜಿ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಸಿದ್ಧತೆಗಳು ಸಾಗಿದೆ. ಇದೇ ಸಂದರ್ಭದಲ್ಲಿ ಸಂಘದ ನೂತನ ಕಟ್ಟಡದ ಉದ್ಘಾಟನೆಯೂ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಶಿವಕುಮಾರ ಘಂಟಿ, ಜಂಟಿ ಕಾರ್ಯದರ್ಶಿ ಅರವಿಂದ ದೇವರಮನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯಪೂರ್ವ 1937ರಲ್ಲಿ ಷಹಬಾಜಾರ್ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿ ಕೆಲಸ ಶುರು ಮಾಡಿರುವ ಸಂಘ, ಇಂದು ಎಪಿಎಂಸಿ ಯಾರ್ಡ್‌ನಲ್ಲಿ ತನ್ನ ಸ್ವಂತ ಕಚೇರಿ ಹೊಂದಿದೆ. ಜತೆಗೇ 400ರಷ್ಟು ಸದಸ್ಯರನ್ನು ಹೊಂದಿದೆ. ಸಂಘ ತನ್ನ 75ವರ್ಷಗಳಲ್ಲಿ ರೈತರಿಗೆ, ಹಮಾಲಿಗಳಿಗೆ ಹಾಗೂ ವರ್ತಕರಾದಿಯಾಗಿ ಎಲ್ಲರಿಗೂ ಹಲವು ವಿಧಗಳಲ್ಲಿ ಆಸರೆಯಾಗಿದೆ ಎಂದು ಘಂಟಿ ಹೇಳಿದರು.
ಆವರ್ತ ನಿಧಿಗೆ ವರ್ತಕರಿಂದ ಹಣ ಸಂಗ್ರಹ ಬೇಡ: ಸರ್ಕಾರ ಆವರ್ತ ನಿಧಿ ಎಂದು ಕಳೆದ 10 ವರ್ಷದಿಂದ ಪ್ರತಿ ನೂರು ರುಪಾಯಿಗೆ 50 ಪೈಸೆಯಷ್ಟು ಹಣ ವರ್ತಕರಿಂದ ಸಂಗ್ರಹಿಸುತ್ತಿದೆ. ಗುಲ್ಬರ್ಗ ಎಪಿಎಂಸಿ ಒಂದರಿಂದಲೇ ವಾರ್ಷಿಕ ರು. 4 ಕೋಟಿ ಹಣ ಆವರ್ತ ನಿಧಿಗೆ ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿರುವ ಎಪಿಎಂಸಿಗಳಿಂದ ಸರಾಸರಿ ರು. 8 ರಿಂದ 10 ಕೋಟಿ ಹಣ ಸಂಗ್ರಹವಾಗುತ್ತದೆ. ಆದರೆ ಆವರ್ತ ನಿಧಿ ನಮ್ಮ ಭಾಗದ ರೈತರಿಗೆ ಅನುಕೂಲವಾಗುತ್ತಿಲ್ಲ. ವರ್ತಕರಿಂದ ಹಣ ಸಂಗ್ರಹಿಸಿದರೆ ಇನ್ನೊಂದು ರೂಪದಲ್ಲಿ ವರ್ತಕರು ರೈತರಿಂದ ಆ ಹಣ ಬಿಟ್ಟೇ ವಹಿವಾಟು ಮಾಡುವಂತಾಗಿದೆ. ಇದರಿಂದ ಪರೋಕ್ಷವಾಗಿ ರೈತರಿಗೆ ತೊಂದರೆ. ಆದ್ದರಿಂದ ಸರ್ಕಾರ ಆವರ್ತ ನಿಧಿಗೆ ಹಣ ಸಂಗ್ರಹಿಸುವುದನ್ನು ಕೈಬಿಡಬೇಕು ಎಂದು ಶಿವಕುಮಾರ ಗಂಟಿ ಆಗ್ರಹಿಸಿದರು.
ಅಡಿಕೆ, ತೆಂಗು ಎಂದು ಸರ್ಕಾರ ನಮ್ಮಿಂದ ಸಂಗ್ರಹವಾಗುವ ಅಪಾರ ಹಣವನ್ನು ಇತರೆ ಭಾಗದ ರೈತರಿಗೆ ವೆಚ್ಚ ಮಾಡುತ್ತಿದೆ. ನಮ್ಮ ಭಾಗದ ತೊಗರಿ, ಕಡಲೆ, ಜೋಳದ ರೈತರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತಿಲ್ಲ. ತವರ್ತ ನಿಧಿ ರು. 200 ಕೋಟಿ ಎಂದು ಹೇಳಿ ಹಣ ಸಂಗ್ರಹ ಶುರುವಾಗಿದ್ದು ಇನ್ನೂ ಮುಂದುವರಿದಿದೆ. ಇದರಿಂದ ರೈತರಿಗೇ ತೊಂದರೆ. ಸರ್ಕಾರ ಇಂತಹ ನೀತಿ ಕೈಬಿಡಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಮಾರುಕಟ್ಟೆ ತೆರಿಗೆಯೂ ಜಾಸ್ತಿ: ಪಕ್ಕದ ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ತೆರಿಗೆ 80 ಪೈಸೆ ಇದೆ. ಆದರೆ ಗುಲ್ಬರ್ಗ ಸೇರಿದಂತೆ ಕರ್ನಾಟಕದಲ್ಲಿ ಈ ತೆರಿಗೆ ಪ್ರಮಾಣ 1.50 ರುಪಾಯಿ ಇದೆ. ಇದರಿಂದಾಗಿ ರೈತರ ಮಾಲು ಹೆಚ್ಚಿನ ಪ್ರಮಾಣದಲ್ಲಿ ಗಡಿಯಲ್ಲಿರುವ ಮಹಾರಾಷ್ಟ್ರ ಮಾರುಕಟ್ಟೆಗಳಿಗೆ ಸಾಗುತ್ತಿದೆ. ದರಿಂದ ವಹಿವಾಟು ಕಮ್ಮಿಯಾಗುತ್ತಿದೆಯಲ್ಲದೆ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟವೂ ಉಂಟಾಗುತ್ತಿದೆ. ಮಾರಾಟ ತೆರಿಗೆಯಲ್ಲಿಯೂ ಸರ್ಕಾರ ಪಕ್ಕದ ಮಹಾರಾಷ್ಟ್ರದ ನೀತಿ ಅನುಸರಿಸಿದರೆ ರೈತರಿಗೆ, ವರ್ತಕರಿಗೆ ಇಬ್ಬರಿಗೂ ಅನುಕೂಲ ಎಂದು ಘಂಟಿ ಆಗ್ರಹಿಸಿದ್ದಾರೆ.
ಇಬ್ಬರನ್ನು ನಾಮನಿರ್ದೇಶನ ಮಾಡಿರಿ: ಎಪಿಎಂಸಿಗೆ ಸರ್ಕಾರ ಮೊದಲೆಲ್ಲಾ ಕಮಿಷನ್ ಏಜೆಂಟ್ ಹಾಗೂ ವರ್ತಕರು ಎಂದು ಪ್ರತ್ಯೇಕವಾಗಿ ಇಬ್ಬರು ಸದಸ್ಯರಿಗೆ ನಾಮನಿರ್ದೇಶನ ಮಾಡುತ್ತಿತ್ತು. ಆದರೆ ಈಚೆಗಿನ ದಿನಗಳಲ್ಲಿ ಕಮಿಷನ್ ಏಜೆಂಟ್ ಪರವಾಗಿ ನಾಮನಿರ್ದೇಶನ ಕೈಬಿಟ್ಟಿದೆ. ಕೇವಲ ವರ್ತಕರ ಪ್ರತಿನಿಧಿ ಎಂದು 1 ನಾಮನಿರ್ದೇಶನ ಮಾತ್ರ ಮಾಡುತ್ತಿದೆ. ಇದರಿಂದಲೂ ನಮಗೆ ಅನ್ಯಾಯವಾಗಿದೆ. ಸರ್ಕಾರ ತಕ್ಷಣ ಮೊದಲಿನಂತೆ ಕಮಿಷನ್ ಏಜೆಂಟ್ ಹಾಗೂ ವರ್ತಕರ ಪ್ರತಿನಿಧಿಗಳು ಎಂದು ಇಬ್ಬರು ಸದಸ್ಯರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಬೇಕು ಎಂದು ಸಂಘ ಆಗ್ರಹಿಸಿದೆ.
ಅಮೃತ ಮಹೋತ್ಸವ ಸಮಾರಂಭದಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಲಾಗುತ್ತದೆ. ಮಾರುಕಟ್ಟೆ ಸಚಿವರು, ಕೇಂದ್ರ, ರಾಜ್ಯದ ಸಚಿವರುಗಳ ಗಮನ ಸೆಳೆಯುವ ಮೂಲಕ ಬೇಡಿಕೆಗಲ ಈಡೇರಿಕೆಗೆ ಆಗ್ರಹಿಸಲಾಗುತ್ತದೆ ಎಂದು ಘಂಟಿ ಹೇಳಿದ್ದಾರೆ.