ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ಫಲಪುಷ್ಪ ಪ್ರದರ್ಶನ

Vishwanath S
Updated On : 22 Feb 2014, 11:11 am

ಗುಲ್ಬರ್ಗ: ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಮತ್ತು ಕೃಷಿ ಇಲಾಖೆ (ಆತ್ಮಾ ಯೋಜನೆ)ಗಳ ಸಂಯುಕ್ತ ಆಶ್ರಯದಲ್ಲಿ ಫೆ.22ರಿಂದ 24ರವರೆಗೆ ಐವಾನ್-ಎ-ಶಾಹಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನವು ಫೆ.22ರಂದು ಸಂಜೆ 4 ಗಂಟೆಗೆ ರೈಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜನ ಖರ್ಗೆ ಉದ್ಘಾಟಿಸುವರು. ಪ್ರದರ್ಶನ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಉದ್ಘಾಟಿಸುವರು. ಸಚಿವರು, ಶಾಸಕರು ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಫೆ.24ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು. ಜಿಪಂ ಅಧ್ಯಕ್ಷ ರಮೇಶ ಮರಗೋಳ ಉದ್ಘಾಟಿಸುವರು. ಈ ಪ್ರದರ್ಶನದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದು.
5 ಮಕ್ಕಳಿಗೆ ಚೆಕ್ ವಿತರಣೆ
ಗುಲ್ಬರ್ಗ: ಕಲೆ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರಿದ 5 ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ 10 ಸಾವಿರ ಮೌಲ್ಯದ ಚೆಕ್ ನೀಡಲಾಯಿತು. ಸಾಂಸ್ಕೃತಿಕ ಚಟುವಟಿಕೆ ಕ್ಷೇತ್ರದಲ್ಲಿ ನಯನ ಮೇಖೇಡಕರ್, ಕ್ರೀಡಾ ಕ್ಷೇತ್ರದಲ್ಲಿ ಶ್ರದ್ಧಾ ಪಾಟೀಲ್, ಸಾಂಸ್ಕೃತಿಕ ಚಟುವಟಿಕೆ ಕ್ಷೇತ್ರದಲ್ಲಿ ರುಷಬ್ ಕುಲಕರ್ಣಿ, ಕ್ರೀಡಾ ಕ್ಷೇತ್ರದಲ್ಲಿ ರೋಹನ್ ಹೈಬತ್ತಿ, ಚಿತ್ರಕಲೆಯಲ್ಲಿ ಸೃಷ್ಟಿ ಮಲ್ಲಿಕಾರ್ಜುನ ಅವರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್. ನಾರಾಯಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಚೇರಿಯ ಅಧೀಕ್ಷಕ ಮಲ್ಲಣ್ಣ ದೇಸಾಯಿ, ಅಸಾಂಸ್ಥಿಕ ಘೋಷಣೆ ಜಿಲ್ಲಾ ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ ಸಂತೋಷ ಕುಲಕರ್ಣಿ ಉಪಸ್ಥಿತರಿದ್ದರು.
ಮಾಹಿತಿ ಕಾರ್ಯಾಗಾರ ಇಂದು
ಗುಲ್ಬರ್ಗ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಮಾಹಿತಿ ಹಕ್ಕು ಅಡಿಯಲ್ಲಿ ಸ್ವಯಂ ಘೋಷಿತ ಮಾಹಿತಿ ನೀಡುವ ಕುರಿತು ಒಂದು ದಿನದ ಗುಲ್ಬರ್ಗ ವಿಭಾಗ ಮಟ್ಟದ ಕಾರ್ಯಾಗಾರವನ್ನು ಫೆ.22ರಂದು ಬೆ.10ಕ್ಕೆ ಜಿಪಂ ಹಳೇ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಮಾಹಿತಿ ಹಕ್ಕು ಆಯೋಗದ ಮಾಹಿತಿ ಆಯುಕ್ತ ಡಾ. ಶೇಖರ್ ಸಜ್ಜನರ್ ಕಾರ್ಯಾಗಾರ ಉದ್ಘಾಟಿಸುವರು. 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಎಲ್.ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ಅಧ್ಯಕ್ಷತೆ ವಹಿಸುವರು. ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ ಅತಿಥಿಗಳಾಗಿ ಭಾಗವಹಿಸುವರು.
ಇಂದು ಕೃಷಿ ಉತ್ಸವ- 2014
ಚಿಂಚೋಳಿ: ಪಟ್ಟಣದ ಚಂದಾಪುರ ನಗರದಲ್ಲಿರುವ ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಕೃಷಿ ಉತ್ಸವ-2014 ಕಾರ್ಯಕ್ರಮ ಫೆ.22ರಂದು ಬೆ.11.30ಕ್ಕೆ ನಡೆಯಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ ತಿಳಿಸಿದ್ದಾರೆ. ಸ್ತಬ್ಧಚಿತ್ರ ಮತ್ತು ತಾಲೂಕು ಕೃಷಿ ಉತ್ಸವ ಕಾರ್ಯಕ್ರಮವನ್ನು ಶಾಸಕ ಡಾ. ಉಮೇಶ ಜಾಧವ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ತಾಪಂ ಅಧ್ಯಕ್ಷ ತಾರಾಮತಿ ಕುಂಬಾರ  ಅಧ್ಯಕ್ಷತೆ ವಹಿಸುವರು. ಬೀದರ್ ಸಂಸದ ಎನ್. ಧರ್ಮಸಿಂಗ್, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಉಪಾಧ್ಯಕ್ಷೆ ಅನೀತಾ ವಳಕೇರಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಪಪಂ ಅಧ್ಯಕ್ಷ ಇಂದುಮತಿ, ಶಾಮರಾವ ಆಗಮಿಸಲಿದ್ದಾರೆ.
ಇಂದು ಪ್ರದರ್ಶನ, ರಸಪ್ರಶ್ನೆ
ಚಿತ್ತಾಪುರ: ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವತಿಯಿಂದ ದಿವಂಗತ ವೆಂಕಟಸ್ವಾಮಿ ಹಡಪದ ಅವರ ಸ್ಮರಣಾರ್ಥವಾಗಿ ಜಿಲ್ಲಾಮಟ್ಟದ ವಿಜ್ಞಾನ ಪ್ರದರ್ಶನ ಹಾಗೂ ರಸಪ್ರಶ್ನೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಾತ್ರ ಫೆ.22 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನಾಗೇಶ ಮೆಂಗಜಿ ತಿಳಿಸಿದ್ದಾರೆ. ಫೆ.22ರಂದು ಮಧ್ಯಾಹ್ನ 2ಕ್ಕೆ ಕಿಂಗ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ.  ವಿಜ್ಞಾನ ಪ್ರಯೋಗಿಕ ಮಾದರಿಗಳು 9ನೇ ಹಾಗೂ 10ನೇ ತರಗತಿಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸಬೇಕು. ಒಂದು ಶಾಲೆಯಿಂದ ಒಂದು ಮಾದರಿಗೆ ಮಾತ್ರ 2 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ವಿರುತ್ತದೆ. ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ವಿದ್ಯಾರ್ಥಿ 50 ಪ್ರವೇಶ ಶುಲ್ಕ. ವಿವರಕ್ಕೆ 99648 11824ಗೆ ಸಂಪರ್ಕಿಸಬಹುದು.
ಖಾದಿ ಹಬ್ಬ- 2014
ಗುಲ್ಬರ್ಗ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ನಬಾರ್ಡ್ ಹಾಗೂ ಎಸ್‌ಬಿಎಚ್ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಫೆ..22ರಂದು ಬೆ.10ಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟದ ಖಾದಿ ಹಬ್ಬ- 2014 ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹಬ್ಬವನ್ನು ಉದ್ಘಾಟಿಸುವರು. ಪ್ರಾತ್ಯಕ್ಷತೆಯನ್ನು ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ, ಖಾದಿ ಮಳಿಗೆಗಳನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ್, ಗ್ರಾಮೋದ್ಯೋಗ ಮಳಿಗೆಗಳನ್ನು ಸಂಸದ ಧರಂಸಿಂಗ್ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ ಆಗಮಿಸುವರು. ಶಾಸಕ ದತ್ತಾತ್ರೇಯ ಪಾಟೀಲ್ ಅಧ್ಯಕ್ಷತೆ ವಹಿಸುವರು.
ಇಂದು ಚಿಂತನ ಮಂಥನ
ಗುಲ್ಬರ್ಗ: ಬಹುಜನ ಹೋರಾಟ ಸಮಿತಿಯು ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿ ಫೆ.22ರಂದು ಸಂಜೆ 5 ಗಂಟೆಗೆ ಬಹುಜನರು ಮತ್ತು ಸಂವಿಧಾನದ ಮೂಲ ಹಕ್ಕುಗಳ ಕುರಿತು ಚಿಂತನ ಮಂಥನ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ರಾಜು ಕಾಂಬಳೆ ತಿಳಿಸಿದ್ದಾರೆ. ಶಾಸಕ ಜಿ. ರಾಮಕೃಷ್ಣ ಉದ್ಘಾಟಿಸುವರು. ಸಂಸ್ಥಾಪಕ ಲಕ್ಷ್ಮಣ ಕೋರಿ ಅಧ್ಯಕ್ಷತೆ ವಹಿಸುವರು. ಡಾ. ಬಸವರಾಜ ಎಂ.ಬಪ್ಪನ್. ಪ್ರೊ. ಮಲ್ಲಿಕಾರ್ಜುನ ತಾವರರ್, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಶಿವಾನಂದ ಸಾಹೂಕರ, ಸೋಮಶೇಖರ ಗೋನಾಯಕ, ಹೇಮಾವತಿ ಲಿಂಗಣ್ಣ ಪೂಜಾರಿ, ಮಹ್ಮದ್ ಹುಸೇನ್ ಬಾಷಾ ಸೇರಿದಂತೆ ಇತರರು ಭಾಗವಹಿಸುವರು.
ಉಸ್ತುವಾರಿ ಸಚಿವರ ಪ್ರವಾಸ
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಫೆ.22ರಂದು ನಗರಕ್ಕೆ ಆಗಮಿಸಿ ಬೆ.10.30ಕ್ಕೆ ಪರಿಶಿಷ್ಟ ಜಾತಿಗಳು, ಸಫಾಯಿ ಕರ್ಮಚಾರಿಗಳು, ಹಿಂದುಳಿದ ವರ್ಗಗಳು ಹಾಗೂ ವಿಭಿನ್ನ ಆರ್ಹರ ವರ್ಗಕ್ಕೆ ಸೇರಿದ ಸಾಮಾಜಿಕ ನ್ಯಾಯ ಹಾಗೂ ಸಶಕ್ತೀಕರಣ ಸಚಿವಾಲಯದ ಯೋಜನೆಗಳ ಸಂಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾಸಾಶನ ಬಿಡುಗಡೆಗೆ ಆಗ್ರಹ
ಗುಲ್ಬರ್ಗ:ಕಳೆದ ಆರು ವರ್ಷಗಳಿಂದ ವಿಕಲಚೇತನ ಮಾಸಾಶನ ದೊರಕದ ಕಾರಣ ಭಿಕ್ಷಾಟನೆಗೆ ಮುಂದಾದ ಇಲ್ಲಿನ ಪಂಡಿತ ದೀನದಯಾಳ ಉಪಾಧ್ಯಾಯ ನಗರದ ನಿವಾಸಿ ಚೇತನ್ ಚಂದ್ರಕಾಂತ್ ವಟಾರೆಗೆ ಕೂಡಲೇ ಮಾಸಾಶನವನ್ನು ನೀಡಬೇಕು ಎಂದು ನ್ಯಾಷನಲಿಸ್ಟ್ (ರಾಷ್ಟ್ರವಾದಿ) ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನಿಸಾರ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ಅವರಿಗೆ ಮನವಿ ಪತ್ರ ನೀಡಿದ ಎನ್‌ಸಿಪಿ ಪದಾಧಿಕಾರಿಗಳು ಕೂಡಲೇ ವಟಾರೆಗೆ ಮಾಸಾಶನವನ್ನು ಪುನರಾರಂಭಿಸಬೇಕು. ಜತೆಗೆ ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ಹಣ ನೀಡಬೇಕು ಎಂದು ಮನವಿ ಮಾಡಿದ್ದಾರೆ. ವಟಾರೆ ಕುಟುಂಬ ಆರ್ಥಿಕವಾಗಿ ಜರ್ಜರಿತವಾಗಿದ್ದು, ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಅನುಕೂಲಕ್ಕೆ ಪಡಿತರ ಚೀಟಿ ನೀಡಬೇಕು. ಇವರ ತಂದೆ ನಾಲ್ಕು ವರ್ಷಗಳ ವರ್ಷಗಳ ಹಿಂದೆಯೇ ಸಾವಿಗೀಡಾಗಿದ್ದಾರೆ.  ಸರ್ಕಾರದ ಯೋಜನೆಗಳಿಂದ ವಂಚಿತವಾದ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಅಹ್ಮದ್ ಎಚ್ಚರಿಸಿದ್ದಾರೆ.
ಬಿಎಸ್ಸೆನ್ನೆಲ್ ಗ್ರಾಹಕರ ಪರದಾಟ
ಚಿಂಚೋಳಿ: ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿರುವ (ಎಸ್‌ಬಿಐ ಹತ್ತಿರ) ಭಾರತ ಸಂಚಾರ ನಿಗಮ ನಿಯಮಿತ ಕಾರ್ಯಾಲಯವು ಎರಡು ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಬಿಲ್ಲು ಪಾವತಿಸುವ ಗ್ರಾಹಕರು ತುಂಬಾ ತೊಂದರೆ ಪಡುವಂತಾಗಿದೆ ಸಮಾಜ ಸೇವಕ ಭೀಮಶೆಟ್ಟಿ ಮುಕ್ಕಾ ತಿಳಿಸಿದ್ದಾರೆ. ಪಟ್ಟಣದ ಬಿಎಸ್‌ಎನ್‌ಎಲ್ ಕಾರ್ಯಾಲಯದಲ್ಲಿ ಕೇವಲ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದು, ಅವರು ಅನಾರೋಗ್ಯದ ನಿಮಿತ್ತ ಒಂದು ವಾರ ರಜೆ ಹಾಕಿ ಕಚೇರಿ ಬೀಗ ಹಾಕಿಕೊಂಡು ಸೋಮವಾರ ಹೋಗಿದ್ದಾರೆ. ಹೀಗಾಗಿ ಫೋನ್ ಬಿಲ್ಲು ಪಾವತಿಸುವ ಗ್ರಾಹಕರು ಅಲೆದಾಡುವಂತಾಗಿದೆ. ಫೋನ್ ಬಿಲ್ಲು ಪಾವತಿಸಲು ಮತ್ತು ಇನ್ನಿತರ ಸಣ್ಣ ವಿಷಯಕ್ಕೆ ವಿಚಾರಿಸಲು ತೊಂದರೆಪಡುವಂತಾಗಿದೆ. ಈ ಬಗ್ಗೆ ಸೇಡಂ ಮತ್ತು ಗುಲ್ಬರ್ಗ  ಬಿಎಸ್‌ಎನ್‌ಎಲ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಮೇಲಾಧಿಕಾರಿಗಳು ಗಮನ ಹರಿಸಬೇಕೆಂದು ಸಮಾಜ ಸೇವಕ ಭೀಮಶೆಟ್ಟಿ ಮುಕ್ಕಾ ಒತ್ತಾಯಿಸಿದ್ದಾರೆ.
ಮೂಲ ಸೌಕರ್ಯಕ್ಕಾಗಿ ಒತ್ತಾಯ
ಗುಲ್ಬರ್ಗ: ನಗರದ ವಾರ್ಡ್ 13 ಮತ್ತು 14ರ ಖಾನಾಪುರ, ಪಾಚಾಪುರ ಬಡಾವಣೆಗಳಿಗೆ ಮೂಲ ಸೌಕರ್ಯ ಪೂರೈಸುವಂತೆ ಆಗ್ರಹಿಸಿ ಭಾರತೀಯ ರಿಪಬ್ಲಿಕನ್ ಪಕ್ಷದಿಂದ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ  ಪ್ರತಿಭಟನೆ ನಡೆಸಲಾಯಿತು. ನಾಲ್ಕು ದಶಕಗಳ ಹಿಂದೆ ಹುಟ್ಟಿಕೊಂಡಿರುವ ಈ ಬಡಾವಣೆಗಳಲ್ಲಿ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಅಧಿಕಾರಿಗಳಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪಾಚಾಪುರ ಬಡಾವಣೆಯಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.
ಇಂದು ವಾರ್ಷಿಕ ಸ್ನೇಹ ಸಮ್ಮೇಳನ
ಕೆಂಭಾವಿ: ಸಮೀಪದ ಮಾಲಗತ್ತಿ ಗ್ರಾಮದ ಸಿದ್ಧಾರ್ಥ ಎಜುಕೇಶನ್ ಟ್ರಸ್ಟ್ ಇವರು ಡಾ. ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಫೆ.22ರ ಶನಿವಾರ ಹಮ್ಮಿಕೊಂಡಿದೆ.  ಕಾರ್ಯಕ್ರಮದ ಸಾನ್ನಿಧ್ಯವನ್ನು ಶಾಂತರುದ್ರ ಮಹಾಸ್ವಾಮಿ ವಹಿಸಲಿದ್ದು, ಉದ್ಘಾಟಕರಾಗಿ ಡಯಟ್ ಪ್ರಾಚಾರ್ಯ ಟಿ.ಜಿ. ಸೈಯದ್, ಅಧ್ಯಕ್ಷತೆ ಟ್ರಸ್ಟ್‌ನ ಅಧ್ಯಕ್ಷ ಭೀಮರಾವ್ ನಾಟೇಕಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಇಓ ಎ.ವಿ. ಕೆಂಪರಂಗಯ್ಯ, ಬಸವರಾಜ ಮಲ್ಲೆ, ಕೆ. ಕಟ್ಟಿಮನಿ ಭಾಗವಹಿಸಲಿದ್ದಾರೆ ಎಂದು ಶಾಲೆ  ಮುಖ್ಯಗುರು ಅಬ್ದುಲ್ ಪಟೇಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತತ ಅಧ್ಯಯನ ಗುರುಭಕ್ತಿ ಅಗತ್ಯ
ಹುಣಸಗಿ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿರಬೇಕು. ಪ್ರತಿಯೊಂದರಲ್ಲಿಯೂ ಹೊಸತನ ಕಾಣುತ್ತಾ ಮುನ್ನಡೆಯಬೇಕು. ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡಾಗ ಇಬ್ಬರ ನಡುವೆ ಉತ್ತಮ  ಬಾಂಧವ್ಯ ಮೂಡಿ ಕಲಿಕೆಯಲ್ಲಿ ಪ್ರಗತಿಯಾಗಲು ಸಾಧ್ಯ ಎಂದು ತಾಳಿಕೋಟೆಯ ಉಪನ್ಯಾಸಕ ಶ್ರೀಕಾಂತ ಪತ್ತಾರ್ ಹೇಳಿದರು.  ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  ಪರೀಕ್ಷೆಯ ಬಗ್ಗೆ ಭಯ ಬೇಡ. ಸತತ ಅಧ್ಯಯನ, ಪರಿಶ್ರಮದಿಂದ ಖಂಡಿತಾ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಈ ದಿಸೆಯಲ್ಲಿ ಆತ್ಮವಿಶ್ವಾಸ ಕೂಡ ಬಹಳ ಮುಖ್ಯ ಎಂದು ಅನೇಕ ಸಾಧಕರ ಸಾಧನೆಗಳ ಉದಾಹರಣೆಗಳ ಮೂಲಕ  ಪತ್ತಾರ್ ವಿವರಿಸಿದರು. ಉಪನ್ಯಾಸಕ ಸುಣಗಾರ್, ಮೇಟಿ ಹಾಗೂ ಇತರ ಶಿಕ್ಷಕರು, ವಿದ್ಯಾರ್ಥಿಗಳು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement