ಜಯಲಲಿತಾ ನಿರ್ಧಾರ ಖಂಡಿಸಿ ರಸ್ತೆತಡೆ, ಪ್ರತಿಕೃತಿ ದಹನ
ಚಿತ್ತಾಪುರ: ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಿಡುಗಡೆ ಮಾಡುತ್ತಿರುವುದು ಖಂಡನೀಯ ಎಂದು ಚಿತ್ತಾಪುರ ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಅಧ್ಯಕ್ಷ ಶಿವಕುಮಾರ ಸುಲ್ತಾನಪುರ ಹಾಗೂ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ನೇತೃತ್ವದಲ್ಲಿ ಲಾಡ್ಜಿಂಗ್ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಜಯಲಲಿತಾ ಅವರ ಪ್ರತಿಕೃತಿಯನ್ನು ಸುಡಲಾಯಿತು. ಸುಪ್ರಿಂಕೋರ್ಟ್ ಅದೇಶ ನೀಡಿದ ಮರುದಿನವೇ ತುರ್ತು ಸಚಿವ ಸಂಪುಟ ಕರೆದು ಅಪರಾಧಿಗಳನ್ನು 3 ದಿನದಲ್ಲಿ ಬಿಡುಗಡೆ ಮಾಡಲು ಹೊರಟಿರುವದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಅಲ್ಲದೆ ಹತ್ಯೆ ಮಾಡಿದವರನ್ನು ಬಿಡುಗಡೆ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ತಲುಪಿದಂತಾಗುತ್ತದೆ ಎಂದು ಹೇಳಿ, ಇದನ್ನು ಕೇಂದ್ರ ಮಧ್ಯ ಪ್ರವೇಶಿಸಿ ತಡೆಯಬೇಕೆಂದು ಒತ್ತಾಯಿಸಲಾಯಿತು. ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಸುಲ್ತಾನಪುರ, ಉಪಾಧ್ಯಕ್ಷ ಅಬ್ದುಲ್ ಕಲೀಂ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಮುಖಂಡರಾದ ತಿಮ್ಮಾರೆಡ್ಡಿ ಪಾಲಪ, ಬೆಂಜಿ ಮೋಹನ, ಶಿವಯೋಗಿ ರಾವೂರ ಭಾಗವಹಿಸಿದ್ದರು.