ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈಲು ನಿಲ್ದಾಣ; ಸ್ವಯಂಚಾಲಿತ ಮೆಟ್ಟಿಲು ಸೇವೆ

Vishwanath S
Updated On : 22 Feb 2014, 11:10 am

ಕ.ಪ್ರ. ವಾರ್ತೆ ,  ಗುಲ್ಬರ್ಗ ,  ಫೆ.21
ಈಚೆಗಷ್ಟೇ ರೇಲ್ವೆ ಲೇಖಾನುದಾನ ಬಜೆಟ್ ಮಂಡಿಸಿ ಅದರಲ್ಲಿಯೂ ಹೊಸದಾಗಿ 4 ರೇಲುಗಳ ಸೇವೆಯನ್ನು ಗುಲ್ಬರ್ಗ ಜನರಿಗೆ ನೀಡುವ ಮೂಲಕ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜನಮನ ಗೆದ್ದಿದ್ದಾರೆ. 8 ತಿಂಗಳ ಹಿಂದೆ ತಾವು ರೇಲ್ವೆ ಸೌಲಭ್ಯಗಳ ವಿಚಾರದಲ್ಲಿ ಗುಲ್ಬರ್ಗಕ್ಕೆ ಒದಗಿಸುವುದಾಗಿ ಹೇಳಿದ್ದ ಎಸ್ಕಲೇಟರ್, 4ನೇ ಪ್ಲಾಟ್‌ಫಾರ್ಮ್, ಪಿಟ್‌ಲೈನ್‌ನಂತಹ ಪ್ರಮುಖ ಸವಲತ್ತುಗಳನ್ನು ಒದಗಿಸುವ ಮೂಲಕ ನುಡಿದಂತೆ ನಡೆದಿದ್ದಾರೆ.
ರೇಲ್ವೆ ಸಚಿವರಾದ 8 ತಿಂಗಳ ಹಿಂದೆ ಗುಲ್ಬಗಂ ನಿಲ್ದಾಣಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ್ದ ಖರ್ಗೆ, 4ನೇ ಪ್ಲಾಟ್‌ಪಾರ್ಮ್, ವಯೋವೃದ್ಧ ಪ್ರಯಾಣಿಕರಿಗಾಗಿ ಸ್ವಯಂಚಾಲಿತ ಮೆಟ್ಟಿಲು ಸೌಕರ್ಯ(ಎಸ್ಕಲೇಟರ್ಸ್) ಶೀಘ್ರ ಒದಗಿಸುವ ಮಾತನ್ನಾಡಿದ್ದರು.
ಎಸ್ಕಲೆಟರ್ ಸೌಕರ್ಯ: ಅದರಂತೆ ಫೆ. 22ರಂದು ಇವೆರಡೂ ಹೊಸ ಸವಲತ್ತುಗಳು ಗುಲ್ಬರ್ಗ ನಿಲ್ದಾಣಕ್ಕೆ ಸೇರ್ಪಡೆಗೊಳ್ಳುತ್ತಿವೆ. ಪ್ಲಾಟ್‌ಪಾರ್ಮ್ 1 ಹಾಗೂ 2, 3ರಲ್ಲಿ ತಲಾ ಒಂದರಂತೆ 2 ಎಸ್ಕಲೆಟರ್ಸ್ ಯಂತ್ರಗಳು ಅಳವಡಿಸಲಾಗುತ್ತಿದೆ. ಪ್ರಯಾಣಿಕರು ರೇಲ್ವೆ ಹಳ ದಾಟಲು ಹಾಗೂ ಪ್ಲಾಟ್‌ಫಾರ್ಮ್ ಬದಲಿಸಲು ಅನುಕೂಲವಾಗುವಂತೆ ಎಸ್ಕಲೆಟರ್ಸ್ ತಮ್ಮ ಮಹತ್ವ ಪಾತ್ರ ನಿಭಾಯಿಸಲಿವೆ.
ರು. 54.5 ಲಕ್ಷ ವೆಚ್ಚದ ಈ ಎಸ್ಕಲೆಟರ್ ನಿಮಿಷಕ್ಕೆ 100 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ತುರ್ತು ಸಂದರ್ಭದಲ್ಲಿ ಎಸ್ಕಲೇಟರ್ಸ್‌ಗಳನ್ನು ಕೆಳಗಿನಿಂದ ಮೇಲಕ್ಕಷ್ಟೇ ಅಲ್ಲದೆ ಮೇಲಿನಿಂದ ಕೆಳಕ್ಕೂ ಪ್ರಯಾಣಿಕರನ್ನು ಸಾಗಿಸುವಂತೆ ಅನುಕೂಲ ಕಲ್ಪಿಸಬಹುದಾಗಿದೆ. ಈ ಸ್ವಯಂಚಾಲಿತ ಮೆಟ್ಟಿಲು ಸೌಕರ್ಯ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.
4ನೇ ಪ್ಲಾಟ್‌ಫಾರ್ಮ್ ಅಭಿವೃದ್ಧಿ: ಗುಲ್ಬರ್ಗ ರೇಲ್ವೆ ನಿಲ್ದಾಣದಲ್ಲಿ ದಶಕಗಳಿಂದ ಮೂರೇ ಪ್ಲಾಟ್‌ಪಾರ್ಮ್ ಇದ್ದವು. ಪ್ರಯಾಣಿಕರ ಹಾಗೂ ಸಂಚರಿಸುವ ರೈಲುಗಳ ಸಂಖ್ಯೆ ಹಿಗ್ಗಿದ್ದರೂ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಹಾಗೇ ಮುಂದುವರಿದಿತ್ತು. ತಾರಫೈಲ್ ಭಾಗದಲ್ಲಿ ಅಂದರೆ ನಿಲ್ದಾಣದ ಈಗಿರುವ ಎದುರಿಗಿನ ಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ, ಯಾರೂ 4ನೇ ಪ್ಲಾಟ್‌ಫಾರ್ಮ್ ಅಭಿವೃದ್ಧಿಗೆ ಗಮನ ನೀಡಿರಲಿಲ್ಲ.
ರೇಲ್ವೆ ಸಚಿವರಾದ ನಂತರ ಖರ್ಗೆಯವರು 4ನೇ ಪ್ಲಾಟ್‌ಫಾರ್ಮ್ ಅಭಿವೃದ್ಧಿಗೆ ಆದ್ಯತೆ ನೀಡಿದ್ದಲ್ಲದೆ, ಅಲ್ಲಿ ಟಿಕೆಟ್ ಕೌಂಟರ್ ಸೌಕರ್ಯವನ್ನೂ ಒದಗಿಸುವ ಹೇಳಿಕೆ ನೀಡಿದ್ದರು. ಇದೀಗ ಅವರ ಈ ಹೇಳಿಕೆಯೂ ಅನುಷ್ಠಾನಗೊಂಡಿದೆ. ರು. 3.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ 4ನೇ ಪ್ಲಾಟ್‌ಫಾರ್ಮ್ ಸಿಂಧುಗೊಂಡಿದೆ. 12 ಮೀಟರ್‌ಗಳ 550 ಮೀಟರ್ ಉದ್ದದ ಹೊಚ್ಚಹೊಸ ಪ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ತುಂಬ ಅನುಕೂಲವಾಗಿದೆ.
ಹೊಸ ಪಿಟ್- ಸಿಕ್ ಲೈನ್‌ಗೆ ಅಡಿಗಲ್ಲು: ಗುಲ್ಬರ್ಗದಿಂದಲೇ ಹೊಸ ರೈಲುಗಳನ್ನು ಉಗಮ ಮಾಡಲು ಅನುಕೂಲವಾಗುವಂತೆ ಇಲ್ಲಿ ಹೊಸತಾಗಿ ಪಿಟ್ ಲೈನ್ ಹಾಗೂ ಸಿಕ್ ಲೈನ್ ಯೋಜನೆ ರೂಪಿಸಲಾಗುತ್ತಿದೆ. ಫೆ. 22ರಂದೇ ಮಲ್ಲಿಕಾರ್ಜುನ ಖರ್ಗೆ ಇವೆರಡೂ ಯೋಜನೆಗಳಿಗೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ರು. 41.09 ಕೋಟಿ ವೆಚ್ಚದ ಪಿಟ್ ಲೈನ್ ಗುಲ್ಬರ್ಗದಿಂದಲೇ ಹೊಸ ರೇಲುಗಳ ಆರಂಭಕ್ಕೆ ಬೇಕಾಗುವಂತಹ ಎಲ್ಲಾ ಅವಶ್ಯಕತೆ, ಅಗತ್ಯತೆಗಳನ್ನು ಪೂರೈಸಲಿದೆಯಲ್ಲದೆ ಇದರಿಂದ ಗುಲ್ಬರ್ಗ ರೈಲು ಇತಿಹಾಸದಲ್ಲೇ ಹೊಸತೊಂದು ಉಪಕ್ರಮ ಸಾಧಿಸಿದಂತಾಗುತ್ತದೆ.
ಮಹತ್ವದ ಯೋಜನೆ: ಪಿಟ್ ಲೈನ್ ಜೊತೆಗೇ ಮದರ್ ತೆರೆಸಾ ರೇಲ್ವೆ ಮೇಲ್ ಸೇತುವೆ ಪಕ್ಕದಲ್ಲೇ ಸಿಕ್ ಲೈನ್, ರೇಲ್ವೆ ನಿರ್ವಹಣೆಯ ಶೆಡ್ ನಿರ್ಮಾಣವಾಗುತ್ತಿವೆ. ಇದರಿಂದ ರೈಲೊಂದರ ನಿರ್ವಹಣೆಗೆ ಅಗತ್ಯವಿರುವ ಸಕಲ ಸೌಕರ್ಯಗಳು ಗುಲ್ಬರ್ಗ ಹೊಂದಿದಂತಾಗುತ್ತದೆ. 2015ರ ಮಾರ್ಚ್ ಒಳಗಾಗಿ ಈ ಮಹತ್ವದ ಯೋಜನೆ ಮುಕ್ತಾಯಗೊಳ್ಳುವಂತಹ ಗಡುವಿನೊಂದಿಗೆ ಕಾಮಗಾರಿ ಚಾಲನೆಗೊಳ್ಳುತ್ತಿದೆ.
ಫೆ.22ರ ಮಧ್ಯಾಹ್ನ 12.30ಕ್ಕೆ ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಸಮರಂಭದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಎಸ್ಕಲೇಟರ್, 4ನೇ ಪ್ಲಾಟ್‌ಫಾರ್ಮ್ ಸೌಕರ್ಯ ಗುಲ್ಬರ್ಗ ಭಾಗದ ಜನತೆಗೆ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೇ ಪಿಟ್- ಸಿಕ್ ಲೈನ್‌ಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮಾಜಿ ಸಿಎಂ ಧರಂಸಿಂಗ್, ರಾಜ್ಯಸಬಾ ಸದಸ್ಯ ಬಸವರಾಜ ಪಾಟೀಲ್ ಸೇಡಂ, ಎಲ್ಲಾ ಶಾಸಕರು, ಎಂಎಲ್ಸಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement