ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಫೆ.22
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 9 ತಿಂಗಳಿಂದ ನಿಷ್ಕ್ರೀಯಗೊಂಡಿದ್ದು, ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಸಂಫೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೂರಿದರು.
ನಗರದ ಅಟಲ್ ಬಿಹಾರಿ ವಾಜಪೇಯ ಬಡಾವಣೆಯ ವಿಶಾಲ ಮೈದಾನದಲ್ಲಿ ಫೆ.28ರಂದು ನಡೆಯುವ ನರೇಂದ್ರ ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೇರವೇರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿಗೂಢತೆ ಭೇದಿಸುವ ಮನಸ್ಸಿಲ್ಲ: ಕಬ್ಬು ಬೆಳೆಗಾರರ, ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಗುಲ್ಬರ್ಗ ಸ್ಟೇಶನ್ ಬಜಾರ್ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ನಿಗೂಢ ಸಾವು, ವಿಚಿತ್ರ ಗುಂಡಿನ ಚಕಮಕಿ ಪ್ರಕರಣವನ್ನೂ ಭೇದಿಸಲು ಮನಸ್ಸು ಮಾಡುತ್ತಿಲ್ಲ ಎಂದರು.
ಬಂಡೆ ಪ್ರಕರಣ ತನಿಖೆ ಸಿಬಿಐಗೆ ಒಪ್ಪಿಸದೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ಉಳಿಸುವಂತಹ ಪ್ರಯತ್ನ ಹಾಗೂ ಒಂದು ಸಮೂಹದ ಒಲೈಕೆಗೋಸ್ಕರ ಒಬ್ಬ ನಿಷ್ಠಾವಂತ ಅಧಿಕಾರಿಯ ಸಾವಿನ ಪ್ರಕರಣ ಮುಚ್ಚಿಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ನಲ್ಲಿ ಭಿನ್ನಮತ: ಕಾಂಗ್ರೆಸ್ನಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಬದಲಾವಣೆ ಮಾಡುವ ಇಂಗಿತ ಹೊರಹಾಕಿದೆ. ಈ ಬಗ್ಗೆ ಕಾಂಗ್ರೆಸ್ನಲ್ಲೇ ಗುಸುಗುಸು ಶುರುವಾಗಿದೆ ಎಂದರು. ಕೇಂದ್ರ ಸರ್ಕಾರದ ವಿವಿಧ ಹಗರಣ, ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದು, ಇದರಿಂದ ಬಿಜೆಪಿ ಮತ್ತು ನರೇಂದ್ರ ಮೋದಿ ಅಲೆ ಸೃಷ್ಟಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ ಎಂದು ಹೇಳಿದರು.
ಮಾಧ್ಯಮಗಳ ಸಮೀಕ್ಷೆ ಪ್ರಕಾರ- ದೇಶದ ಜನ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಇಚ್ಛಿಸಿದ್ದಾರೆ. ರಾಜ್ಯದಲ್ಲಿಯೂ ಮೋದಿ ಅಲೆಯಿದ್ದು ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲಲಿದೆ. ಕಷ್ಟಪಟ್ಟಾದರೂ ಪರವಾಗಿಲ್ಲ, ಗುಲ್ಬರ್ಗ- ಬೀದರ್ ಜಿಲ್ಲೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.
28ರಂದು ಪಟ್ಟಿ ಬಿಡುಗಡೆ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಫೆ.28ರಂದು ಬಿಡುಗಡೆ ಮಾಡಲಾಗುವುದು. 26ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಶಿವಮೊಗ್ಗಕ್ಕೆ ಬರುತ್ತಿರುವುದರಿಂದ ಅವರ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿ ಬಿಡುಗಡೆ ಮಾಡಲಾಗುವುದು. 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಒಬ್ಬೊಬ್ಬರ ಹೆಸರುಗಳನ್ನು ಸೂಚಿಸಲಾಗಿದ್ದು, 3 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆದಿದೆ.