ತೆಗಳುವವರಿಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.22
ರೇಲ್ವೆ ಖಾತೆ ದೊರಕಿದೆಯಾದರೂ ಅಲ್ಪಾವಧಿಯಲ್ಲಿ ಏನ್ಮಾಡ್ತಾರೆ ಖರ್ಗೆ ಎಂದು ಕಹುಕವಾಡುವವರಿಗೆ ಕಾಮಗಾರಿಗಳಿಂದಲೇ ಉತ್ತರ ನೀಡುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದಾಗಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೇವಲ ನಾಲ್ಕು ತಿಂಗಳಿಗಾಗಿ ಲೇಖಾನುದಾನ ಇರುವ ರೇಲ್ವೆ ಬಜೆಟ್ ಮಂಡಿಸಿ ದೇಶದುದ್ದಗಲಕ್ಕೂ ಮಾಧ್ಯಮಗಳು, ಜನರ ಮೆಚ್ಚುಗೆ ಗಳಿಸಿದ್ದಾಗಿ ಹೇಳಿದ ಸಚಿವರು, ತಾವು ರೇಲ್ವೆ ಸಚಿವರಾಗಿ ನಿರ್ವಹಿಸದ ಪಾತ್ರದಿಂದ ಕರ್ನಾಟಕಕ್ಕೆ ಹಾಗೂ ಗುಲ್ಬರ್ಗಕ್ಕೇ ಕೀರ್ತಿ ಬಂದಿದೆ. 9 ವರ್ಷದಲ್ಲಿ ಮಾಡುವಷ್ಟು ಸಾಧನೆಯನ್ನು 9 ತಿಂಗಳಲ್ಲಿ ಮಾಡಿದ್ದಾಗಿ ತಿಳಿಸಿದರು.
85 ಹೊಸ ರೈಲುಗಳ ಘೋಷಣೆ: ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದಂತೆ ದೇಶದಾದ್ಯಂತ 7 ಹೆಚ್ಚುವರಿ ಸೇರಿದಂತೆ ಒಟ್ಟು 85 ನೂತನ ರೈಲುಗಳನ್ನು ಪ್ರಾರಂಭಿಸಲಾಗಿದೆ. ಕೇವಲ 4 ತಿಂಗಳಲ್ಲಿ ಎಂಜಿನ್, ಬೋಗಿ ಹಾಗೂ ಹಳೆಯ ರೈಲುಗಳನ್ನು ದುರಸ್ತಿಗೊಳಿಸಿ ಈ ಕ್ರಮ ಕೈಗೊಳ್ಳಲಾಗಿದೆ. ದೇಶದ ಮೂಲೆ ಮೂಲೆಗಳಿಗೆ ಹೊಸ ಲೈನ್ ಅಳವಡಿಸಿ ರೈಲುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಹೊಂದಿದ್ದ 137 ರೈಲುಗಳನ್ನು ಬಿಡುವ ಗುರಿಯಲ್ಲಿ 15 ಬಾಕಿ ಉಳಿದಿವೆ. ಮಾರ್ಚ್ ಅಂತ್ಯದೊಳಗಾಗಿ 6 ರೈಲುಗಳನ್ನು ಓಡಿಸಲಾಗುತ್ತಿದ್ದು, ಇನ್ನುಳಿದ ರೈಲುಗಳು ಮಾರ್ಗ ಸಮಸ್ಯೆ, ಭೂಸ್ವಾಧೀನ ತೊಂದರೆಯಿಂದ ಓಡಿಸಲಾಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಹುಡುಕಿ ಅವುಗಳನ್ನು ಓಡಿಸಲಾಗುತ್ತದೆ ಎಂದು ಹೇಳಿದರು.
ಮೇ ತಿಂಗಳಲ್ಲಿ ಪಿಟ್‌ಲೈನ್ ಪೂರ್ಣ: ಗುಲ್ಬರ್ಗದಲ್ಲಿ ಹಮ್ಮಿಕೊಂಡಿರುವ ಪಿಟ್‌ಲೈನ್ ಕಾಮಗಾರಿಯು ಮೇ ಅಂತ್ಯದಲ್ಲಿ ಪೂರ್ರ್ಣಗೊಳ್ಳಲಿದ್ದು ಜೂನ್‌ನಿಂದ ಗುಲ್ಬರ್ಗ- ಹೈದ್ರಾಬಾದ್ ಇಂಟರ್‌ಸಿಟಿ ಪ್ರಾರಂಭಿಸಲಾಗುವುದು. ಮುಂಬೈ- ಚೆನ್ನೈ ಮಧ್ಯದ 450 ಕಿಮೀ ಉದ್ದದ ಡಬಲ್‌ಲೈನ್ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 1,500 ಕೋಟಿಯಲ್ಲಿ 210 ಕಿಮೀ ಪೂರ್ಣಗೊಂಡಿದೆ.
ಇನ್ನುಳಿದ ಕಾಮಗಾರಿಯು 2015ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವುದು. ಇದೇ ಮಾರ್ಗದ 940 ಕಿಮೀ ವಿದ್ಯುದ್ದೀಕರಣ ಹಮ್ಮಿಕೊಳ್ಳಲಾಗಿದ್ದು 1,500 ಕೋಟಿ ವೆಚ್ಚದಲ್ಲಿ 310 ಕಿಮೀ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 2016ರ ಡಿಸೆಂಬರ್ ಅಂತ್ಯಕ್ಕೆ ಉಳಿದ ಕಾಮಗಾರಿ ಪೂರ್ಣಗೊಳ್ಳುವುದು ಎಂದರು.
ಮುಂಬೈ- ಬೆಂಗಳೂರು ಜೋಡಿಹಳಿ ನಿರ್ಮಾಣ: ಮುಂಬೈ- ಬೆಂಗಳೂರು ಮಧ್ಯದ 310 ಕಿಮೀ ಡಬಲ್ ಲೈನ್ ಕಾಮಗಾರಿಯಲ್ಲಿ 160 ಕಿಮೀ ಪೂರ್ಣಗೊಂಡಿದ್ದು ಡಿಸೆಂಬರ್ 2015ರೊಳಗಾಗಿ ಉಳಿದದ್ದು ಮುಗಿಯಲಿದೆ. ಇದೇ ಮಾರ್ಗದಲ್ಲಿ 940 ಕಿಮೀ ವಿದ್ಯುದ್ದೀಕರಣ ಕಾಮಗಾರಿ ಕೈಗೊಂಡಿದ್ದು, 2014ರ ಡಿಸೆಂಬರ್ ಅಂತ್ಯಕ್ಕೆ 310 ಕಿಮೀ ಕಾಮಗಾರಿ ಪೂರ್ಣಗೊಳ್ಳುವುದು. ಇನ್ನುಳಿದ ಕಾಮಗಾರಿಯು 2016ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವುದು.
ಈ ಕಾಮಗಾರಿಗಳು ಪೂರ್ಣಗೊಂಡಲ್ಲಿ ಮುಂಬೈ- ಬೆಂಗಳೂರು ಮಧ್ಯ ಮೂರೂವರೆ ಗಂಟೆ , ಮುಂಬೈ-ಚೆನ್ನೈ ನಾಲ್ಕೂವರೆ ಗಂಟೆ ಹಾಗೂ ಮುಂಬೈ- ಹೈದ್ರಾಬಾದ 3ರಿಂದ 5 ಗಂಟೆಗಳ ಪ್ರಯಾಣ ಕಾಲ ಕಡಿಮೆಗೊಳ್ಳಲಿದೆ ಎಂದು ವಿವರಿಸಿದರು.