ನೇತ್ರ ದಾನದಿಂದ ಜನ್ಮ ಸಾರ್ಥಕ: ರಾಂಪೂರ
ಅಫಜಲ್ಪುರ: ಮಾನವನ ಅಂಗಾಂಗಳಲ್ಲಿ ಅಮೂಲ್ಯವಾದದ್ದು ಕಣ್ಣು. ಇದರಿಂದ ಸೃಷ್ಟಿ ಸೌಂದರ್ಯ ಸವಿಯುವುದರ ಜೊತೆಗೆ ಕಡುಬಡವ ದೃಷ್ಟಿಹೀನರನ್ನು ಗುರುತಿಸಿ ಅವರಿಗೆ ದೃಷ್ಟಿ ನೀಡಿದಾಗ ಮಾತ್ರ ಮಾನವನ ಜನ್ಮ ಸಾರ್ಥಕವಾಗುತ್ತದೆ ಎಂದು ಗುಲ್ಬರ್ಗ ಹೈಕಶಿ ಸಂಸ್ಥೆಯ ಕಾರ್ಯದರ್ಶಿ ಶರದ್ ರಾಂಪೂರ ಹೇಳಿದರು. ತಾಲೂಕಿನ ದೇಸಾಯಿ ಕಲ್ಲೂರು ಗ್ರಾಮದಲ್ಲಿ ದಿ. ಹೀರಾಬಾಯಿ ದೇಶಮುಖ ಇವರ ಸ್ಮರಣಾರ್ಥವಾಗಿ ಏರ್ಪಡಿಸಿದ ಉಚಿತ ನೇತ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೃಷ್ಟಿಹೀನರಿಗೆ ದೃಷ್ಟಿ ನೀಡುವುದೇ ಮಹಾದಾನ. ಇದಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ವಿಜಯಕುಮಾರ ದೇಶಮುಖ, ಡಾ. ಸಂಪತ್ತು ಲೂಯಿಯಾ, ಸುಭಾಷ ಬಿಜಾಪೂರೆ, ನೇತ್ರ ತಜ್ಞ ಡಾ. ಪೂಜಾರಿ, ಶಿವರಾಜ ನಿಗ್ಗುಡಗಿ ದಂತ ತಜ್ಞ ಸುಭಾಷ ಪಾಟೀಲ್ ಹಾಗೂ ಸಿದ್ದರಾಮ ದೇಶಮುಖ, ಸಿದ್ದಯ್ಯ ಆಕಾಶಮಠ ಇದ್ದರು.