ಹಳೆಯದಾದ ತಿಂಥಣಿ ಸೇತುವೆ ಪರಿಶೀಲನೆ
ಸುರಪುರ: ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ರಾಜ್ಯ ಹೆದ್ದಾರಿ-19 ರ ಮೇಲೆ ನಿರ್ಮಿಸಲ್ಪಟ್ಟ ತಾಲೂಕಿನ ತಿಂಥಣಿ ಸೇತುವೆ ಪುನಾನಿರ್ಮಾಣವನ್ನು ಮತ್ತೊಮ್ಮೆ ಪರಿಶೀಲಿಸುವ ಭರವಸೆ ನೀಡಿದ್ದಾರೆಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದ್ದಾರೆ.
ತಿಂಥಣಿ ಸೇತುವೆಯ ಸದ್ಯದ ಪರಿಸ್ಥಿತಿ ಕುರಿತಂತೆ ಅಧಿವೇಶನದಲ್ಲಿ ನಾನು ಸಚಿವರನ್ನು ಪ್ರಶ್ನಿಸಿದಾಗ, ಸದರಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 1959ರಲ್ಲಿ ಪ್ರಾರಂಭಿಸಿ 1965ರಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಸೇತುವೆ ಪುನಾನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ, ಹಾಗಿದ್ದಲ್ಲಿ ಎಂದು ನಿರ್ಮಾಣ ಮಾಡಲಾಗುವುದು, ಇದಕ್ಕಾಗಿ ನಿಗಪಡಿಸಿದ ಅನುದಾನವೆಷ್ಟು ಎಂದು ಪ್ರಶ್ನಿಸಲಾಯಿತು. ಅದಕ್ಕೆ ಸಚಿವರು ಉತ್ತರಿಸಿ, ಈ ಸೇತುವೆ 3 ಪೆಡಸ್ಟಲ್ಗಳನ್ನು 10 ವೆಚ್ಚದಲ್ಲಿ 2008 ರಲ್ಲಿ ಬೆಂಗಳೂರಿನ ವಿನ್ಯಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ದುಸ್ತಿಗೊಳಿಸಲಾಗಿದೆ. ನೈಪುಣ್ಯತೆ ಹೊಂದಿರುವ ಸಮಾಲೋಚಕರಿಂದ ಪರಿವೀಕ್ಷಣೆ ಮಾಡಿಸಿ, ಪುನಾನಿರ್ಮಾಣ ಮಾಡಲಾಗುವುದು ಎಂದು ಸಚಿವರು ಆಶ್ವಾಸನೆ ನೀಡಿದ್ದಾರೆಂದು ಶಾಸಕ ಆರ್ವಿಎನ್ ತಿಳಿಸಿದ್ದಾರೆ.
26ರಂದು ಝಳಕಿ ದಲಿತ ಸೇನೆ ಉದ್ಘಾಟನೆ
ಆಳಂದ: ತಾಲೂಕಿನ ಝಳಕಿ ಗ್ರಾಮದ ದಲಿತ ಸೇನೆಯ ಶಾಖೆಯನ್ನು ಫೆ.26ರಂದು ಬೆಳಗ್ಗೆ ಡಿವೈಎಸ್ಪಿ ಎಸ್.ಎಲ್. ಝಂಡೇಕರ್ ಉದ್ಘಾಟಿಸಲಿದ್ದಾರೆ. ಗೌತಮ ಬುದ್ಧ ಹಾಗೂ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ತಹಸೀಲ್ದಾರ್ ಪರಮೇಶ್ವರ ಸ್ವಾಮಿ ಪೂಜೆ ಕೈಗೊಳ್ಳುವರು. ಶಿವಪ್ಪ ಮೇಲಿನಕೇರಿ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಇಒ ಲಕ್ಷ್ಮಣ ಶೃಂಗೇರಿ, ಸಿಡಿಪಿಓ ಅಶೋಕ ರಾಜನ, ಪತ್ರಕರ್ತ ಮಹಾದೇವ ವಡಗಾಂವ, ನಾಗೇಂದ್ರ ಜವಳಿ, ಮಲ್ಲಿಕಾರ್ಜುನ ಬೋಳಣಿ ಆಗಮಿಸುವರು. ದಲಿತ ಸಮಾಜದ ಜವಾಬ್ದಾರಿ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಮತ್ತು ಮಕ್ಕಳ ಶಿಕ್ಷಣದಲ್ಲಿ ತಂದೆ ತಾಯಿ ಜವಾಬ್ದಾರಿ ಕುರಿತು ಉಪನ್ಯಾಸಕ ಸಂಜಯ ಪಾಟೀಲ ಉಪನ್ಯಾಸ ನೀಡುವರು.
ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಮನವಿ
ಆಳಂದ: ತಾಲೂಕಿನ ಸಾವಳೇಶ್ವರ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮದ ನೆಲದ ನುಡಿ, ಓದುವ ಗೆಳೆಯರ ಬಳಗ ಒತ್ತಾಯಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಳಗವು ಗ್ರಾಮದಲ್ಲಿ ಕಳೆದ 12 ವರ್ಷಗಳಿಂದ ಗ್ರಂಥಾಲಯ ಪ್ರಾರಂಭವಾಗಿದೆ. ಆದರೆ ಇದುವರೆಗೂ ಅದಕ್ಕೆ ಕಟ್ಟಡ ಒದಗಿಸಿಲ್ಲ.
ಗ್ರಾಮದಲ್ಲಿ 60 ಎಸ್ಸೆಸ್ಸೆಲ್ಸಿ, 26 ಪಿಯುಸಿ, ಸ್ನಾತಕೋತರ ಪದವಿಯ 18 ವಿದ್ಯಾಥಿಗಳಿದ್ದಾರೆ. ಓದಲು ಆಸಕ್ತಿಯುಳ್ಳ ವಯೋವರದ್ಧರಿದ್ದು, ಇವರ ಅನುಕೂಲಕ್ಕಾಗಿ ಗ್ರಾಮದಲ್ಲಿ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ. ಹಲವು ಬಾರಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಬಳಗವು, ವಿದ್ಯಾರ್ಥಿಗಳ, ಯುವಕರ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಾಮಕ್ಕೆ ಗ್ರಂಥಾಲಯ ಕಟ್ಟಡ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಎಬಿವಿಪಿ ಪ್ರತಿಭಟನೆ
ಗುಲ್ಬರ್ಗ: ಬಿಸಿಎಂ ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿ ಸೌಲಭ್ಯದಿಂದ ದೂರವಿಡುವ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ವಲ್ಲಭಭಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರ ಆದೇಶದ ಪ್ರಕಾರ ಬಿಸಿಎಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿ ರದ್ದಾಗಲಿದೆ. ಕಾಯಿದೆಯಿಂದ ಬಡ ಗ್ರಾಮೀಣ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಆಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೂಡ ಈ ಕಾಯಿದೆಯನ್ನು ತಕ್ಷಣ ವಾಪಸ್ ಪಡೆದುಕೊಳ್ಳಬೇಕೆಂದು ನಗರ ಕಾರ್ಯದರ್ಶಿ ಅರುಣ ಪಾಟೀಲ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುವುದಿಲ್ಲ ಎಂದು ಹೇಳಿದ ಸರ್ಕಾರದ ಕ್ರಮ ಹಿಂತೆಗೆದುಕೊಳ್ಳಬೇಕು ಎಂದರು.
ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಮನವಿ
ಗುಲ್ಬರ್ಗ: ನಗರದ ನೆಹರು ಗಂಜ್ ಪ್ರದೇಶದಲ್ಲಿ ಬಸ್ನಿಲ್ದಾಣ ನಿರ್ಮಿಸುವಂತೆ ಆಗ್ರಹಿಸಿ ಜೈ ಕನ್ನಡಿಗರ ವೇದಿಕೆ ಈ.ಕ.ರ. ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಇಲ್ಲಿ ಬಸ್ನಿಲ್ದಾಣ ವಿಲ್ಲದೆ ಸಾರ್ವಜನಿಕರು ಬಸ್ಸಿಗಾಗಿ ರಸ್ತೆಯ ಮೇಲೆ ನಿಂತು ಕಾಯಬೇಕಾಗಿದೆ. ಅದಲ್ಲದೆ ಬಸ್ ರಸ್ತೆ ಮೇಲೆ ಬಂದು ನಿಂತರೆ ಅಲ್ಲಿ ಸಂಚಾರಕ್ಕೆ ಬಹಳಷ್ಟು ತೊಂದರೆ ಉಂಟಾಗುತ್ತಿರುವುದರಿಂದ ಗಂಜ್ ಪ್ರದೇಶದಲ್ಲಿ ಒಂದು ಬಸ್ನಿಲ್ದಾಣ ನಿರ್ಮಿಸಬೇಕು. ಮಹಿಳೆಯರಿಗಾಗಿ ವಿಶೇಷ ಬಸ್ಗಳನ್ನು ಒದಗಿಸಬೇಕೆಂದು ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರಹತಾಬಾದ್ ಆಗ್ರಹಿಸಿದರು. ಅಣವೀರ ಪಾಟೀಲ, ಕಾಶಿನಾಥ ಮಾಳಗಿ, ಸಂದೇಶ ಪವಾರ, ಸತೀಷ ಫರಹತಾಬಾದ್, ಬಂಟಿ ಕಮನೂರ, ಸುರೇಶ ಚನ್ನವೀರ ನಗರ, ಬಾಬುರಾವ ಚಿಂಚಸೂರು, ಶರಣು ಮಡಿವಾಳ, ಶರಣು ಬಾಣೆಕಾರ ಶ್ರೀಕಾಂತ ಅಷ್ಟಗಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.