'ತಾರತಮ್ಯ ನೀತಿಯಿಂದ ಬೆಳೆ ಹಾಳುಗೆಡವದಿರಿ'
ಶಹಾಪುರ: ಸಕಲ ಬೆಳೆಗಳ ರಕ್ಷಣೆಗಾಗಿ ಈ ಹಿಂದಿನ ಸಲಹಾ ಸಮಿತಿ ನಿರ್ಣಯದಂತೆ ಮಾ. 31ರ ವರೆಗೆ ಕಾಲುವೆಯಲ್ಲಿ ನೀರು ಹರಿಸಬೇಕು ಹಾಗೂ ಅನವಶ್ಯಕ ತಾರತಮ್ಯ ನೀತಿ ಕೈಬಿಡಬೇಕು ಎಂದು ಪ್ರಾಂತ್ಯ ರೈತ ಸಂಘ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ.
ಈಗಾಗಲೇ ಕೋರಿಕೆಯ ಪ್ರಕಾರ ಪ್ರತಿ ತಿಂಗಳು 5 ದಿನ ಡ್ಯಾಮಿನ ಗೇಟ್ ಬಂದ್ ಮಾಡುವದರಿಂದ ನೀರು ಉಳಿತಾಯ ಆಗುವುದರ ಜೊತೆಗೆ ರೈತರ ಜಮೀನು ಹಾಳಾಗುವುದನ್ನು ತಡೆಯಲು ಮುಂದಿನ ಮುಂಗಾರಿ ಹಂಗಾಮಿನಿಂದಲೂ ಪ್ರತಿ 20 ದಿನಕ್ಕೆ 5 ದಿನ ಕಡ್ಡಾಯವಾಗಿ ಗೇಟ್ ಬಂದ್ ಮಾಡುವ ಮೂಲಕ ರೈತರ ಜಮೀನು ಸವುಳು- ಜೋಗ ಆಗುವುದನ್ನು ತಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ರೈತ ಸಂಘದ ಪ್ರತಿ ಜಿಲ್ಲೆಯಿಂದ ಒಬ್ಬರನ್ನು ಸದಸ್ಯರನ್ನಾಗಿ ತಪ್ಪದೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪ್ರಾಮಾಣಿಕರನ್ನು ನೇಮಿಸಿ: ಅಲ್ಲದೇ, ಭ್ರಷ್ಟ ಹಾಗೂ ಲೋಕಾಯುಕ್ತ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಇಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅವರ ಸ್ಥಾನಗಳಿಗೆ ಪ್ರಾಮಾಣಿಕ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಬೇಕು ಎಂದು ಎಂದು ಸಂಚಾಲಕರಾದ ಎಸ್.ಎಂ.ಸಾಗರ, ಸಿದ್ದಯ್ಯ ಹಿರೇಮಠ, ಬೀಮಸಿ.ಕಲಾದಗಿ, ಮಲ್ಲಣ್ಣಗೌಡ.ಮಾ.ಪಾ, ದರ್ಮಣ್ಣದೋರಿ, ಮಲ್ಲಯ್ಯ ಜಾಲಳ್ಳಿ, ಅಣ್ಣಾರಾವ ಇಳಿಗೇರ್, ಸುಭಾಸ ಹೋಸಮನಿ, ಯಲ್ಲಪ್ಪ ಚಿನ್ನಾಕಾರ್, ಎಂ.ಎಸ್.ಗೌಡ ಮುಂತಾದವರು ಆಗ್ರಹಿಸಿದ್ದಾರೆ.