'ಬಂಜಾರ ಸಮಾಜ ಅಭಿವೃದ್ಧಿಗೆ ಬಿಜೆಪಿ ಆದ್ಯತೆ'
ಚಿತ್ತಾಪುರ: ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಬಂಜಾರ ಸಮಾಜಕ್ಕೆ ಹಾಗೂ ಸಮಾಜದ ಏಳಿಗೆಗಾಗಿ ದೇಶದಲ್ಲಿ ಯಾವ ಸರ್ಕಾರಗಳೂ ನೀಡದ ಸೌಲಭ್ಯಗಳನ್ನು ನೀಡಿದ ಕೀತಿ ಕರ್ನಾಟಕ ಬಿಜೆಪಿಯದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ 275ನೇ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ನಾನು ಮುಖ್ಯಮಂತ್ರಿ ಇದ್ದ ವೇಳೆ ಪ್ರತಿಪಕ್ಷದವರ ವಿರೋಧದ ನಡುವೆಯೂ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇನೆ. ತಾಂಡಾ ಅಭಿವೃದ್ಧಿಗೆ ಜಿಲ್ಲಾ ಕೇಂದ್ರಗಳಲ್ಲಿ ಬಂಜಾರ ಭವನಕ್ಕೆ 2 ಕೋಟಿಯಂತೆ ಅನುದಾನ ನೀಡಿದ್ದೇನೆ. ಚಿತ್ತಾಪುರ ಮತಕ್ಷೇತ್ರಕ್ಕೆ 40 ತಾಂಡಾಗಳಲ್ಲಿ ಸೇವಾಲಾಲ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೇನೆ.
ಅಲ್ಲದೆ, ಸಾಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಗುವಿವಿಗೆ ಉಪ ಕುಲಪತಿ, ಕೆಪಿಎಸ್‌ಸಿ ಸದಸ್ಯ, ರಾಮಾನಾಯ್ಕ ಅವರನ್ನು ಮಾಹಿತಿ ಅಯೋಗದ ಸದಸ್ಯರನ್ನಾಗಿ ಮಾಡಿ ಆ ಸಮಾಜಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದೇನೆ. ಇದರ ಸದುಪಯೋಗ ಪಡೆದು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೋಳಬೇಕೆಂದು ಕರೆ ನೀಡಿದರು.
ಮೋದಿಗೆ ಬೆಂಬಲಿಸಿ: ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ಫೆ.28ರಂದು ಗುಜರಾತ್ ಸಿಎಂ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದು, ಸರ್ವ ಸಮಾಜದ ಬಂಧುಗಳು ಸದರಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿದರು. ಡಾ. ಸಿದ್ದತೋಟೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು. ಡಾ. ರಾಮರಾವ ಮಹಾರಾಜರು, ಜೇಮಸಿಂಗ್ ಮಹಾರಾಜರು ಮುಗಳನಾಗಾಂವ, ಸೋಮಶೇಖರ ಶಿವಾಚಾರ್ಯ ಕಂಬಳೇಶ್ವರ ಮಠ, ಪರವತಲಿಂಗ ಪರಮೇಶ್ವರ ಮಹಾರಾಜರು ಬೆಡಸೂರ, ಬಳಿರಾಮ ಮಹಾರಾಜರು ಗೊಬ್ಬೂರವಾಡಿ ಮತ್ತು ವಿಠಲ ಮಹಾರಾಜರು ಶಹಪುರ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವ ಬಾಬುರಾವ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಜಿಪಂ ಸದಸ್ಯೆ ಪಾರ್ವತಿಬಾಯಿ ಚವ್ವಾಣ, ವಿಠಲ ಜಾಧವ, ಬಿಜೆಪಿ ತಾಲುಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಸುಭಾಷ ರಾಠೋಡ ಪ್ರಾಸ್ತವಿಕವಾಗಿ ಮಾತನಾಡಿದರು. ರಾಮದಾಸ ಚವ್ವಾಣ ನಿರೂಪಿಸಿದರು.
ಸಂತ ಸೇವಾಲಾಲರ ಮೆರವಣಿಗೆ
ಚಿತ್ತಾಪುರ: ಆಲ್ ಇಂಡಿಯಾ ಬಂಜಾರ್ ಸೇವಾ ಸಂಘ ಹಮ್ಮಿಕೊಂಡ ಸಂತ ಸೇವಾಲಾಲ ಮಾಹರಾಜರ ಬಾವಚಿತ್ರದ ಭವ್ಯ ಮೆರವಣಿಗೆಯನ್ನು ಸ್ಟೇಷನ್ ತಾಂಡಾ ಸೇವಾಲಾಲ ಮಂದಿರಿಂದ ಆರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಆಡತ ಬಜಾರ್ ಆವರಣಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಮುಗಳನಾಗಾಂವ ಜೇಮಸಿಂಗ್ ಮಹಾರಾಜರು, ಬೇಡಸೂರಿನ ಪರವತಲಿಂಗ ಪರಮೇಶ್ವರ ಮಹಾರಾಜರು, ಗೊಬ್ಬೂರು ವಾಡಿ ಬಳರಾಮ ಮಹಾರಾಜರನ್ನು ರಥದಲ್ಲಿ ಕೂಡಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಬಂಜಾರ್ ಸಮಾಜದ ಮಹಿಳೆಯರು, ಮುಖಂಡರು, ಯುವಕರು ಭಾಗವಹಿಸಿದರು.