ವರ್ಷದ ನಂತರ ಒಲಿದು ಬಂತು ಅಧಿಕಾರ ಯೋಗ
ಗುರುಮಠಕಲ್: ಆಯ್ಕೆಯಾದರೂ ಅಧಿಕಾರವಿಲ್ಲದೇ ತ್ರಿಶಂಕು ಸ್ಥಿತಿಯಲ್ಲಿದ್ದ ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಇದೀಗ ವರ್ಷದ ವನವಾಸದಿಂದ ಮುಕ್ತಿ ಸಿಕ್ಕಿದೆ. ಮೀಸಲಾತಿ ಕುರಿತಾಗಿ ಉಚ್ಛನ್ಯಾಯಾಲಯದ ಮೆಟ್ಟಿಲೇರಿದ್ದ ವಿವಾದದ ಬಗ್ಗೆ ಸೋಮವಾರ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ, ಪಟ್ಟಣ ಪಂಚಾಯ್ತಿ ಸದಸ್ಯರು ಇನ್ನು ತಮ್ಮ ಅಧಿಕಾರ ಸ್ವೀಕರಿಸಲು ಹಸಿರು ನಿಶಾನೆ ಸಿಕ್ಕಂತಾಗಿದೆ.
ವರ್ಷವಾಗುತ್ತಾ ಬಂದಿತ್ತು: ರಾಜ್ಯದ ನಗರ ಹಾಗೂ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮುಂಬರುವ ಮಾ. 7ಕ್ಕೆ ಒಂದು ವರ್ಷ ಕಳೆಯುತ್ತದೆ. ಆದರೆ ಒಂದು ವರ್ಷದಿಂದ ಉಚ್ಛ ನ್ಯಾಯಲಯದಲ್ಲಿದ್ದ ಮೀಸಲಾತಿ ಗೊಂದಲದ ಬಗೆಗಿನ ಆದೇಶ ಹೊರಬಿದ್ದಿರುವುದರಿಂದ ಇನ್ನಾದರೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಆಶಿಸಲಾಗಿದೆ.
ಏನಾಗಿತ್ತು?: 2011ರ ಜನಗಣತಿ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಶೇ. 50ರಷ್ಟು ನಿಗದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಹಾಲಿ ಸದಸ್ಯರು ಕೋರ್ಟ್ ಮೆಟ್ಟಿಲೇರಿ 2007ರ ಮೀಸಲಾತಿ ಪ್ರಕಾರ ಚುನಾವಣೆ ನಡೆದಿದ್ದು, ಹೀಗಾಗಿ ಯಾವುದೇ ಸಂದರ್ಭದಲ್ಲೂ ಮೀಸಲಾತಿಯನ್ನು ಶೇ. 50ರಷ್ಟು ಪಾಲಿಸಲು ಆಗುವುದಿಲ್ಲ ಎಂದು ವಾದಿಸಿದ್ದರು.
ಕೋರ್ಟ್ ಹೇಳಿದ್ದೇನು?: ಇದೀಗ, ಉಚ್ಛ ನ್ಯಾಯಾಲಯ ಇದಕ್ಕೆ ಸ್ಪಷ್ಟವಾದ ಆದೇಶ ನೀಡಿದೆ. 2007ರ ಮೀಸಲಾತಿ ಅನ್ವಯವೇ ಚುನಾವಣೆ ನಡೆದಿರುವುದರಿಂದ ಅದೇ ಮೀಸಲಾತಿಯ ಆಧಾರದಲ್ಲೇ ನಗರಸಭೆ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದೆ. ವರ್ಷದಿಂದ ಗದ್ದುಗೆ ಏರಲು ಆಯ್ಕೆಗೊಂಡಿದ್ದ ಸದಸ್ಯರಿಗಿದ್ದ ಗ್ರಹಣ ಇದೀಗ ಬಿಡುಗಡೆಯಾಗಿದೆ.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಕಷ್ಟ
ಮೀಸಲಾತಿ ಬಗ್ಗೆ ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಿದೆಯಾದರೂ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಮತ್ತೆ ವಿವಾದ ತಲೆದೋರುವ ಸಂಭವವಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ಉಚ್ಛ ನ್ಯಾಯಾಲಯ ಹಸಿರು ನಿಶಾನೆ ತೋರಿದೆ. ಆದರೆ, ಅದು ಕಷ್ಟದ ಮಾತು ಎಂದು ಹೇಳಲಾಗುತ್ತಿದೆ. 2011ರ ಮೀಸಲಾತಿಯನ್ನೇ ಜಾರಿಗೊಳಿಸಬೇಕು ಎಂದು ವರ್ಷದ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದ ಕೆಲವರಿಗೆ ಸೋಮವಾರ ನ್ಯಾಯಾಲಯ ನೀಡಿರುವ ತೀರ್ಪು ಸಮಾಧಾನ ತಂದಿಲ್ಲ. ಹಾಗಾಗಿ, ಅವರು ಸುಪ್ರೀಂ ಕೋರ್ಟ್‌ನಲ್ಲಿ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಬಹುದು. ಹಾಗಾದರೆ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬೀಳಲಿದೆ.
ಅಲ್ಲದೇ, ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಂಭವವಿದ್ದು, ಅದು ಘೋಷಣೆಯಾದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಅಷ್ಟರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದೆ.