ಸಮಾಜದ ಅಭಿವೃದ್ಧಿಗಾಗಿ ಸಂಘಟಿತ ಹೋರಾಟ ಅಗತ್ಯ
ಜೇವರ್ಗಿ: ಸಂಘಟಿತ ಹೋರಾಟದಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕುಂಬಾರ ಸಮಾಜ ಬಾಂಧವರು ತಾಲೂಕು ಮಟ್ಟದ ಪ್ರಥಮ ಸಮಾವೇಶ ಆಯೋಜಿಸಿರುವುದು ಶ್ಲಾಘನೀಯ ಎಂದು ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಸಂತಸ ವ್ಯಕ್ತಪಡಿಸಿದರು.
ತಾಲೂಕು ಕುಂಬಾರ ಸಮಾಜದ ವತಿಯಿಂದ ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಮೊದಲ ಕುಂಬಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿನ ಅತಿ ಚಿಕ್ಕ ಸಮುದಾಯಗಳಲ್ಲಿ ಒಂದಾದ ಕುಂಬಾರ ಸಮಾಜ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶ್ಯೆಕ್ಷಣಿಕವಾಗಿ ಮುಂದೆ ಬರಬೇಕಾಗಿದೆ ಎಂದರು.
ಶೋಷಿತರ ಜನಸಂಖ್ಯೆ ಹೆಚ್ಚಳ: ಹಿಂದುಳಿದ ಸಮಾಜಗಳಲ್ಲಿ ಶೋಷಿತ ವರ್ಗಗಳ ಜನಸಂಖ್ಯೆ ಹೆಚ್ಚಾಗಿದೆ. ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಕುಂಬಾರ ಸಮಾಜದ ಬಾಂಧವರು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಸಮಾಜದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಲಾಗವುದು ಎಂದು ಖರ್ಗೆ ಹೇಳಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಾತನಾಡಿ, ಕುಂಬಾರ ಸಮಾಜದ ಬಾಂಧವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುರುಪೀಠದ ಬಸವಗುಂಡಯ್ಯ ಶರಣರು ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಶಾಸಕ ಡಾ. ಅಜಯಸಿಂಗ್, ಅಲ್ಲಂಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇತರರು ಆಗಮಿಸಿದ್ದರು.
ಸಮಾವೇಶದಲ್ಲಿ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಮಹಾರುದ್ರಪ್ಪ ಕುಂಬಾರ, ಬಸವರಾಜ ಕುಂಬಾರ ನಿಡಗುಂದ, ಮೊನಪ್ಪ ಕುಂಬಾರ ಹಂಚಿನಾಳ, ಗಿರೆಪ್ಪಗೌಡ ಪಾಟೀಲ ಕಲ್ಲಹಂಗರ್ಗಾ, ವಿಜಯಕುಮಾರ ಪಾಟೀಲ, ಕಲ್ಲಹಂಗರಗಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಮಮತಾ ಜೋಷಿ ಪ್ರಾರ್ಥಿಸಿದರು. ಶಿವಕುಮಾರ ಚೌಡಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ದೇವೇಂದ್ರ ಕಡಕಲ್ ಸ್ವಾಗತಿಸಿದರು. ಶ್ರೀಮಂತ ಕುಂಬಾರ ಕುಂಬಾರ ನಿರೂಪಿಸಿದರು.
'ಸಮಾಜದಿಂದ ಪಡೆದದ್ದು
ಸಮಾಜಕ್ಕೆ ನೀಡಬೇಕು'
ಶಹಾಬಾದ್: ಸಮಾಜದಿಂದ ಪಡೆದದ್ದು ಸಮಾಜಕ್ಕೆ ಪುನಃ ನೀಡಿದಾಗ ಮಾತ್ರ ಬದುಕಿನಲ್ಲಿ ಸಾರ್ಥಕ ಭಾವವಿರುತ್ತದೆ. ವೈದ್ಯರೂ ಇದರಿಂದ ಹೊರತಲ್ಲ. ಸಮಾಜ ಇರದಿದ್ದರೆ ನಾವು ಮಾಡಿದ ಯಾವುದೇ ಕಾರ್ಯವನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ಬೆಂಗಳೂರಿನ ಪ್ರಖ್ಯಾತ ಸ್ಪರ್ಶ ಆಸ್ಪತ್ರೆ ಖ್ಯಾತ ವೈದ್ಯ ಡಾ. ಶರಣ ಶಿವರಾಜ ಪಾಟೀಲ ಹೇಳಿದರು.
ಶಹಾಬಾದ್ ಲಯನ್ಸ್ ಕ್ಲಬ್ ಹಮ್ಮಿಕೊಂಡ ಸಾಧನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ತಂಡದಲ್ಲಿನ ಕೆಲಸ ಯಶಸ್ಸಿಗೆ ಮುಖ್ಯ ಕಾರಣ. ದೇಶದಲ್ಲಿನ ಇಂದಿನ ವೈದ್ಯಕೀಯ ಸೌಲಭ್ಯ ವಿದೇಶಿಗರ ಕಣ್ಣು ತೆರೆಸಿವೆ ಎಂದರು.
ವಿಭಾಗೀಯ ಅಧ್ಯಕ್ಷ ಸುಧೀರ ಹೂಲಿ, ಮೊದಲ ಮಹಿಳೆ ಅಂಜಲಿ ಹೂಲಿ, ಸಮ್ಮೇಳನ ಅಧ್ಯಕ್ಷ ಶಶಿಕಾಂತ ಪಾಟೀಲ, ಕಾರ್ಯದರ್ಶಿ ಎಸ್.ಎಸ್. ಶಂಕರ್, ರಾಯಚೂರು ವಲಯದ ವಿ.ರಾಮಕೃಷ್ಣ ರೆಡ್ಡಿ, ಗುಲ್ಬರ್ಗ ವಲಯದ ನರಸಿಂಹ ರೆಡ್ಡಿ ವೇದಿಕೆಯಲ್ಲಿದ್ದರು. ಹಿರಿಯ ಸದಸ್ಯ ರಾಜೀಬ ಘೋಷ್, ಎಸ್.ಆರ್. ಗುರಾಗೋಳ, ಶ್ರೀಕಾಂತ ಜೋಷಿ, ಹನಂತರಾವ್ ಇಂಗಿನಶೆಟ್ಟಿ, ಡಾ.ಅಶೋಕ ಮುತ್ತತ್ತಿ, ವಿ.ಸುರೇಶ, ಡಿ.ಎಸ್.ಬಿರಾದಾರ, ವೈ.ದೇವರಾಜ, ಡಾ. ಸದಾನಂದ ಕೋರಿ, ಸುನೀಲ ಜಿಂದೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸ್ಮರಣ ಸಂಚಿಕೆ ಬಿಡುಗಡೆ: ಸಮ್ಮೇಳನದ ಅಂಗವಾಗಿ ಆರ್.ಎ.ಮಹೇಂದ್ರಕರ್ ಸಂಪಾದಿಸಿದ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಗಂಗಮ್ಮ ಶಾಲೆ ಮಕ್ಕಳು ಪ್ರಾರ್ಥಿಸಿದರು. ಶಶಿಕಾಂತ ಪಾಟೀಲ ಸ್ವಾಗತಿಸಿದರು. ಡಾ. ಸುರೇಶ ಜಾಧವ್ ಮತ್ತು ಅಂಜನಾ ಕರಗಿ ನಿರೂಪಿಸಿದರು.