ನಮೋ ಅಲೆಗೆ ಧರಂ, ಖರ್ಗೆ ಧೂಳೀಪಟ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.25
ದೇಶಾದ್ಯಂತ ನರೇಂದ್ರ ಮೋದಿ ಗಾಳಿ ಬೀಸುತ್ತಿದ್ದು, ಮುಂಬರುವ ಲೋಕಸಬೆ ಚುನಾವಣೆಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಇವರಿಬ್ಬರ ಆಟ ನಡೆಯೋದಿಲ್ಲ. ಇವರಿಬ್ಬರು ನಾಯಕರು ತಮ್ಮ ಗಂಟು- ಮೂಟೆ ಕಟ್ಟಿಕೊಳ್ಳಬೇಕಾಗುತ್ತದೆ.
ಹೀಗೆಂದು ಲೇವಡಿ ಮಾಡಿದವರು ರಾಜ್ಯದ ಮಾಜಿ ಡಿಸಿಎಂ ಆರ್. ಅಶೋಕ. ಈಚೆಗೆ ಧರಂಸಿಂಗ್, ಖರ್ಗೆಯವರು ನರೇಂದ್ರ ಮೋದಿ ಹವಾ ಕರ್ನಾಟಕದಲ್ಲಿ, ಅದರಲ್ಲೂ ಹೈ- ಕ ಬಾಗದಲ್ಲಿ ನಡೆಯೋದಿಲ್ಲವೆಂದು ವ್ಯಂಗ್ಯ ಮಾಡಿದ್ದರು. ಈ ನಾಯಕರ ಮಾತಿಗೆ ಪ್ರತ್ಯುತ್ತರ ನೀಡಿದಂತೆ ಮಾತನಾಡಿದ ಅಶೋಕ್, ಮಂಗಳವಾರ ಗುಲ್ಬರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಎರಡಂಕಿಯನ್ನೂ ದಾಟೋದಿಲ್ಲ. ಇಡೀ ದೇಶದಲ್ಲಿ ನೂರು ಸೀಟುಗಳನ್ನು ಗೆದ್ದರೆ ಅದೇ ಅದರ ಮಹಾನ್ ಸಾಧನೆ ಆಗಲಿದೆ ಎಂದರು. ನಮೋ ಗಳಿ ದೇಶವ್ಯಾಪಿ ಬೀಸುವಾಗ ಗುಲ್ಬರ್ಗ ಸೇರಿದಂತೆ ಹೈ- ಕ ಭಾಗದಲ್ಲಿಯೂ ಅದರ ಪರಿಣಾಮ ಉಂಟಾಗಲಿದೆ ಎಂದು ಅವರು ತಿಳಿಸಿದರು.
ಮಾತಾಡದಿರುವುದೇ ಲೇಸು: ಕೇಂದ್ರ ಯುಪಿಎ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಹಗರಣಗಳಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿದ ಅವರು ಖರ್ಗೆ ಮತ್ತು ಧರಂಸಿಂಗ್ ಅವರ ಬಗ್ಗೆ ಹೆಚ್ಚು ಮಾತನಾಡದಿರುವುದೇ ಲೇಸು, ಜನರೇ ಈ ಚುನಾವಣೆಯಲ್ಲಿ ತಮ್ಮ ತೀರ್ಮಾನ ಹೇಳಲಿದ್ದಾರೆ ಎಂದರು.
ಸರ್ಕಾರದ ನಿದ್ರೆ: ಕಳೆದ 9 ತಿಂಗಳಿಂದ ಯಾವುದೇ ರೀತಿಯ ಅಭಿವೃದ್ಧಿ ರಾಜ್ಯದಲ್ಲಿ ನಡೆಯುತ್ತಿಲ್ಲ, ಸರ್ಕಾರ ಈವರೆಗೂ ಎಚ್ಚರವಾಗಿಲ್ಲ. ಕಳೆದ ಬಾರಿ ಬಜೆಟ್ ಅನುದಾನ ಶೇ. 50ರಷ್ಟು ಸಹ ಬಳಕೆಯಾಗಿಲ್ಲ. ಮತ್ತೆ ಬಜೆಟ್ ಮಂಡಿಸಿರುವು ಚುನಾವಣೆ ಗಿಮಿಕ್ ಆಗಿದೆ ಎಂದು ಅವರು ಟೀಕಿಸಿದರು.
ಕ್ರಮಕೈಗೊಳ್ಳುತ್ತಿಲ್ಲ: ಸರ್ಕಾರ ಇದುವರೆಗೂ ಘೋಷಿಸಿರುವ ಎಲ್ಲಾ ರೀತಿಯ ಭಾಗ್ಯದ ಯೋಜನೆಗಳು ದೌರ್ಭಾಗ್ಯದ ಯೋಜನೆಗಳಾಗಿ ಪರಿಣಮಿಸಿವೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ದೂರಿದರು.
ರ್ಯಾಲಿ ಸಿದ್ಧತೆ ಪರಿಶೀಲನೆ: ಸುಮಾರು 30 ಏಕರೆ ಪ್ರದೇಶದಲ್ಲಿ ನಡೆಯುವ ಸಮಾವೇಶಕ್ಕೆ ಬರಪುರ ಸಿದ್ದತೆ ನಡೆದಿದ್ದು, ಈಗಾಗಲೇ ವೇದಿಕೆಗೆ ನಿರ್ಮಾಣದ ಕಾರ್ಯ ನಡೆದಿದ್ದು, ಸುಮಾರು ಒಂದು ಲಕ್ಷ ಜನ ಕೂಡುವಷ್ಟು ಆಸನಗಳ ವ್ಯವಸ್ಥೆ ನಡೆದಿದೆ. ಗುಲ್ಬರ್ಗ ಬೀದರ್ ಮತ್ತು ಸುತ್ತಲಿನ ತಾಲ್ಲೂಕಿಗಳಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದ್ದು. ನಗರದಲ್ಲೆಡೆ ಬಿಜೆಪಿಯ ಹಾಗೂ ನರೇಂದ್ರ ಮೋದಿ ಅವರ ಕಟೌಟ್ ಮತ್ತು ಬ್ಯಾನರ್ಗಳನ್ನು ಹಾಕಲಾಗುತ್ತಿದೆ.
ಬೈಕ್ ರ್ಯಾಲಿ: ಈ ನಿಟ್ಟಿನಲ್ಲಿ ಬೈಕ್ ರ್ಯಾಲಿಯನ್ನೂ ಆಯೋಜಿಸಲಾಗಿತ್ತು. ನಗರದ ಶರಣ ಬಸವೇಶ್ವರ ದೇವಸ್ಥಾನದಿಂದ ಸಮಾವೇಶ ನಡೆಯುವ ಸ್ಥಳದವರೆಗೂ ಸಹ ಶಾಸಕ ದತ್ತಾತ್ರೇಯ ಪಾಟೀಲ ಅವರ ನೇತೃತ್ವದಲ್ಲಿ ಸಾವಿರಕ್ಕೂ ಬೈಕ್ಗಳ ಮೂಲಕ ರ್ಯಾಲಿ ನಡೆಸಲಾಯಿತು.