ಸುರಪುರ: 5.17 ಲಕ್ಷ ಉಳಿತಾಯ ಬಜೆಟ್
ಸುರಪುರ: ಇಲ್ಲಿಯ ಪುರಸಭೆಗೆ ಸರ್ಕಾರಂದ 2014-15ನೇ ಸಾಲಿನ ಮುಂಗಡ ಪತ್ರದಲ್ಲಿ ತೋರಿಸಿರುವಂತೆ ಅನುದಾನ ಬಿಡುಗಡೆಯಾದಲ್ಲಿ ಪಟ್ಟಣದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ನಂತರ ಉಳಿಯುವ ಅಂದಾಜು 5.17 ಲಕ್ಷ ಉಳಿತಾಯದ ಮುಂಗಡ ಪತ್ರವನ್ನು ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಮಂಡಿಸಿದ್ದಾರೆ.
1,513.14 ಲಕ್ಷ ಆದಾಯ ನಿರೀಕ್ಷೆ:ಮಂಗಳವಾರ ಮುಂಗಡ ಪತ್ರ ಮಂಡನೆಯ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಕಳ್ಳಿಮನಿ ವಹಿಸಿದ್ದು ಬಜೆಟ್‌ನಲ್ಲಿ 198.53 ಲಕ್ಷ ಆರಂಭಿಕ ಶಿಲ್ಕು ಇದೆ. 1,513.14 ಲಕ್ಷ ಅಂದಾಜು ಆದಾಯ ನಿರೀಕ್ಷೆಯಿದ್ದು ಒಟ್ಟು 1,711.67 ಲಕ್ಷದಲ್ಲಿ 1,706.50 ಲಕ್ಷ ವೆಚ್ಚದಲ್ಲಿ ಸುಮಾರು 5.17ಲಕ್ಷ ಉಳಿತಾಯವಾಗಲಿದೆ ಎಂದರು.
ಆದಾಯ ಎಲ್ಲಿಂದ?ವಾಣಿಜ್ಯ ಮಳಿಗೆ, ಕಟ್ಟಡ ಬಾಡಿಗೆ, ಅಭಿವೃದ್ಧಿ ಶುಲ್ಕ, ವ್ಯಾಪಾರ ಪರವಾನಗಿ, ಜಾತ್ರೆ ಮತ್ತು ಉರುಸ್‌ಗಳು, ಜನನ-ಮರಣ ಪತ್ರ, ಆಸ್ತಿ ತೆರಿಗೆ ಆದಾಯ ಖಾತ್ರಿ ಪ್ರತಿಗಳು, ಖಾತಾ ಬದಲಾವಣೆ ಸೇರಿದಂತೆ ಅನೇಕ ಶುಲ್ಕಗಳಿಂದ ಬರುವ ಆದಾಯದ ಮಾಹಿತಿಯನ್ನು ನೀಡಿದರು.
ನೀರು ಪೂರೈಕೆಗೆ ಕೈಗೊಂಡ ಕ್ರಮವೇನು? ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ಮಾತನಾಡಿ, ಜಲಾಶಯದ ನೀರು ಮಾರ್ಚ್ ಮೊದಲ ವಾರದವರೆಗೂ ಬರುತ್ತದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು ಮುನ್ನೆಚ್ಚರಿಕೆಯಾಗಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಯಾಗುವಂತೆ ಏನು ಕ್ರಮ ಕೈಗೊಂಡಿದ್ದಿರಿ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷರು, ಈ ಬಾರಿ ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಸದಸ್ಯ ಮಹಿಬೂಬ್ ಒಂಟಿ ಮಾತನಾಡಿ ರಂಗಂಪೇಟೆಯಲ್ಲಿ ಬೋರವೆಲ್ ಕೆಟ್ಟಿವೆ. ಯಾವಾಗ ರಿಪೇರಿ ಮಾಡಿಸುವಿರಿ ಎಂದು ಅಧಿಕಾರಿಗಳಿಗೆ ಕೇಳಿದಾಗ ಅಧಿಕಾರಿಗಳು ಸೂಕ್ತ ಉತ್ತರ ನೀಡಲಿಲ್ಲ. ಆಕ್ರೋಶಗೊಂಡ ಸದಸ್ಯ ತರಾಟೆಗೆ ತೆಗೆದುಕೊಂಡಾಗ ಸಭೆಯಲ್ಲಿ ಗದ್ದಲ ಏರ್ಪಟಿತ್ತು. ನಂತರ ಮುಖ್ಯಾಧಿಕಾರಿ ಮಾತನಾಡಿ,
ಇನ್ನು 2-3 ದಿನಗಳಲ್ಲಿ ಇವನ್ನು ರಿಪೇರಿ ಮಾಡಿಸಲಾಗುವುದು ಎಂದು ಹೇಳಿದರು.
ಬಾಡಿಗೆ ಹೆಚ್ಚಿಸಬೇಕು: ಮಳಿಗೆಗಳಿಗೆ ಬಾಡಿಗೆ ಹೆಚ್ಚಿಸಬೇಕು ಹಾಗು ಆಯಿಲ್ ಮಿಲ್, ಎಪಿಎಂಸಿ ಸೇರಿದಂತೆ ಅನೇಕ ಕಡೆ ಕರ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಕೆಲ ಸದಸ್ಯರು ಸೂಚಿಸಿದರು. ಪುರಸಭೆಯ ಮಳಿಗೆಗಳ ಬಾಡಿಗೆ ಹೆಚ್ಚಿಸುವಂತೆ ತಾಕೀತು ಮಾಡಿದರು.
ಪೈಪುಗಳ ಸೋರಿಕೆ:ಪಟ್ಟಣದಲ್ಲಿ ಪೈಪುಗಳು ಸೋರಿಕೆಯಾಗುತ್ತಿದ್ದು ಇದರ ಬಗ್ಗೆ ನೀರು ಬೀಡುವ ಸಿಬ್ಬಂದಿಗೆ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧ್ಯಕ್ಷರ ಹಿಡಿತವಿಲ್ಲದೆ ಈ ರೀತಿಯಾಗುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡಿ ಸಭೆಯಲ್ಲಿ ಅಚ್ಚರಿ ಮೂಡಿಸಿದರು.
ವಿದ್ಯುತ್ ಕಂಬಗಳನ್ನು ಹಾಕಿಸಬೇಕುಃ ಖಾನಿಕೇರಿಯಲ್ಲಿ ವಿದ್ಯುತ್ ಕಂಬಗಳಿಲ್ಲ. ಕಟ್ಟಿಗೆಯ ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಮಳೆ ಬಂದಾಗ ಅಲ್ಲಲ್ಲಿ ವಿದ್ಯುತ್ ಹರಿಯುತ್ತಿದ್ದು ಜನರು ಭಯಭೀತರಾಗಿದ್ದಾರೆ. ಕೂಡಲೆ ವಿದ್ಯುತ್ ಕಂಬಗಳನ್ನು ಹಾಕಬೇಕು ಎಂದು ಸದಸ್ಯ ಪಾರಪ್ಪ ಗುತ್ತೇದಾರ ಆಗ್ರಹಿಸಿದರು.