ಪತ್ನಿ ಹೂತು ಹಾಕಿದ್ದ ಪತಿ ಸೆರೆ
ಶಹಾಪುರ: ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ (ಡಿ. 25ರಂದು) ಕಾಣೆಯಾಗಿದ್ದ ಚಂದಮ್ಮ ಎಂಬ ಗೃಹಿಣಿಯ ಶವ ಹತ್ತಿಗೂಡೂರ ಹಳ್ಳದಲ್ಲಿ ಪತ್ತೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಪತಿ ಪತಿ ಶಿವಶರಣಪ್ಪನನ್ನು ಬಂಧಿಸಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚಂದಮ್ಮ ಅವರ ಕಾಣಿ ಪ್ರಕರಣ ಪೊಲೀಸರಿಗೆ ಸವಾಲಿನ ಸಂಗತಿಯಾಗಿತ್ತು.
ಅಂದೇನಾಗಿತ್ತು?: ಡಿ. 25ರಂದು ಹತ್ತಿಗೂಡೂರ ಗ್ರಾಮದ ಚಂದಮ್ಮ, ಗಂಡ ಶಿವಶರಣಪ್ಪ ಇಬ್ಬರು ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿದ್ದರು. ಆದರೆ, ಸಾಯಂಕಾಲ ಬರುವಾಗ ಶಿವಶರಣಪ್ಪ ಒಬ್ಬನೇ ಬಂದಿದ್ದ. ಹೆಂಡತಿ ಚಂದಮ್ಮ ಕಾಣೆಯಾಗಿದ್ದಳು. ಈ ಕುರಿತು ತವರುಮನೆ ಕೃಷ್ಣಾಪುರದಲ್ಲಿರುವ ಚಂದಮ್ಮಳ ತವರು ಮನೆಗೂ ಸುದ್ದಿ ತಲುಪಿತ್ತು. ಇದರಿಂದ ಅನುಮಾನಗೊಂಡ ಚಂದಮ್ಮಳ ತವರು ಮನೆಯವರು ಶಹಾಪುರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ಕೊನೆಗೂ ಸಿಕ್ಕಿಬಿದ್ದ ಆರೋಪಿ: ತಲೆ ಮರೆಸಿಕೊಂಡಿದ್ದ ಮಹಿಳೆ ಚಂದಮ್ಮಳ ಪತಿ ಶಿವಶರಣಪ್ಪ ಕಳೆದೆರೆಡು ದಿನಗಳಹಿಂದೆ ಸಮೀಪದ ತಡಿಬಿಡಿ ಗ್ರಾಮದಲ್ಲಿ ಪೋಲಿಸರ ಕೈಗೆ ಸಿಕ್ಕಿದ್ದು ಪೊಲೀಸ್ ಅಧಿಕಾರಿಗಳು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಘಟನೆ ಬಯಲಾಗಿದೆ.
ಪತ್ನಿಯನ್ನು ಕೊಂದು ಹಳ್ಳದಲ್ಲಿ ಶವ ಹೂತಿಟ್ಟಿದ್ದಾಗಿ ಆತ ನೀಡಿದ್ದ ಮಾಹಿತಿ ಆಧಾರದ ಮೇಲೆ, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ಸಮ್ಮುಖದಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಹತ್ತಿಗೂಡೂರ ಹಳ್ಳದಲ್ಲಿ ಶವ ತೆಗೆಯಲಾಗಿದೆ. ಅಲ್ಲದೇ, ಅದು ಚಂದಮ್ಮಳದ್ದೇ ಶವ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿ ಪತಿ ಶಿವಶರಣಪ್ಪನನ್ನು ಬಂಧಿಸಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪಿ.ಐ.ನ್ಯಾಮೇಗೌಡರ ಮತ್ತು ವಿಶೇಷ ಪೋಲಿಸ್ ತಂಡ ಚಂದಮ್ಮಳ ಸಾವಿಗೆ ನ್ಯಾಯ ಒದಗಿಸುವ ವಿಶ್ವಾಸದಲ್ಲಿದೆ.