ಭೂಸ್ವಾಧೀನ ಕಾಯ್ದೆ ಜಾರಿಗೆ ಆಗ್ರಹ
ಗುರುಮಠಕಲ್:ಲೋಕಸಭೆಯಲ್ಲಿ ಅಂಗೀಕಾರವಾದ ಭೂಸ್ವಾಧೀನ ಕಾಯ್ದೆ-2013ನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ಅದರ ಪ್ರಯೋಜನ ದೊರೆಯುವಂತೆ ಮಾಡಬೇಕೆಂದು ಶಾಸಕ ಡಾ. ಎ. ಬಿ. ಮಾಲಕರಡ್ಡಿ ವಿಧಾನಸಭೆಯಲ್ಲಿ ಆಗ್ರಹಿಸಿದರು.
ಶಾಸಕರ ಪ್ರಶ್ನೆಗೆ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕರು, ರಾಜ್ಯದ ರೈತರಿಗೆ ಹೆಚ್ಚಿನ ಪ್ರಯೋಜನವಾಗುವಂತೆ ಕಾಯ್ದೆಯ ನಿಯಮಾವಳಿಗಳನ್ನು ರೂಪಿಸಲು ಸಲಹೆ ನೀಡಿದರು.
ಲೋಕಸಭೆಯಲ್ಲಿ ಅಂಗೀಕಾರದವಾದ ಕಾಯ್ದೆ ಇದೇ ಜ. 1ರಿಂದ ಜಾರಿಗೆ ಬಂದಿದೆ. ರಾಜ್ಯ ಸರ್ಕಾರಗಳು ತಮ್ಮದೇ ನಿಯಮಾವಳಿಗಳನ್ನು ರೂಪಿಸಿಕೊಳ್ಳಲು ಅವಕಾವಿದೆ. ಕರಡು ನಿಯಮಾವಳಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಕರಡು ನಿಯಮಾವಳಿ ಸರ್ಕಾರದ ಪರಿಶೀಲನೆಯಲ್ಲಿದೆ. ಹೊಸ ಕಾಯ್ದೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹೆಚ್ಚಿನ ಜ್ಞಾನದ ಸಲುವಾಗಿ ಜ್ಯುಡಿಷಿಯಲ್ ಆಕಾಡೆಮಿ ಸಹಯೋಗದೊಂದಿಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಆಡಳಿತ ತರಬೇತಿ ಸಂಸ್ಥೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಸಚಿವ ಪ್ರಸಾದ್ ಉತ್ತರಿಸಿದ್ದರು.
ಕೇಂದ್ರದ ಈ ಹೊಸ ಕಾಯ್ದೆ ಅಡಿಯಲ್ಲಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ವದಲ್ಲಿ ಪುನರ್ವಸತಿ ಮತ್ತು ಪುನನಿರ್ಮಾಣ ಕಾರ್ಯ ಕೈಗೊಳ್ಳಬೇಕಿದೆ. ಭೂಸ್ವಾಧೀನಕ್ಕೂ ಮೊದಲು ಯೋಜನೆಯಿಂದ ಸಮಾಜದ ಮೇಲಾಗುವ ಪರಿಣಾಮ ಹಾಗೂ ಗ್ರಾಮಸ್ಥರ ಮತ್ತು ಸ್ಥಳಿಯ ಸಂಸ್ಥೆಗಳೊಂದಿಗೆ ಸಮಾಲೋಚಿಸಬೇಕು.
ಸರ್ಕಾರಿ ಖಾಸಗಿ ಪಾಲುದಾರಿಕೆ ಯೋಜನೆಯ ಭೂಸ್ವಾಧೀನಕ್ಕೆ ಶೇ.70 ರಷ್ಟು ಭೂಮಾಲೀಕರ ಒಪ್ಪಿಗೆ ಮತ್ತು ಖಾಸಗಿ ಕಂಪನಿಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳಲು ಶೇ.80 ರಷ್ಟು ಭೂಮಾಲೀಕರ ಒಪ್ಪಿಗೆ ಅಗತ್ಯವಿದೆ. ಜಮೀನು ಬಿಟ್ಟುಕೊಡುವವರಿಗೆ ಗ್ರಾಮೀಣ ಭಾಗದಲ್ಲಿ ನಾಲ್ಕುಪಟ್ಟು ಹಾಗೂ ನಗರ ಪ್ರದೇಶದಲ್ಲಿ ಎರಡು ಪಟ್ಟು ಪರಿಹಾರ ಒದಗಿಸಲಾಗುತ್ತದೆ. ಶೇ.100ರಷ್ಟು ಸೊಲೇಷಿಯಂ ನಿಗದಿಪಡಿಸಿಲಾಗಿದ್ದು ಪುನರ್ ನಿರ್ಮಾಣ ಮತ್ತು ಪುನರ್ವಸತಿ ಆಡಿಯಲ್ಲಿ ವಿಶೇಷ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಪರಿಹಾರ ಮೊತ್ತಕ್ಕೆ ಆದಾಯ ತೆರಿಗೆ ಮತ್ತು ಮುದ್ರಾಂಕ ಶುಲ್ಕದಿಂದ ವಿನಾಯಿತಿ, ಯೋಜನೆಯಿಂದ ಬಾಧಿತರಾಗುವ ಕುಟುಂಬಗಳಿಗೆ ವಿಶೇಷ ಸೌಲಭ್ಯ, ಪರಿಶಿಷ್ಟ ಜಾತಿ ಮತ್ತು ವರ್ಗಗಳವರಿಗೆ ವಿಶೇಷ ಅವಕಾಶಗಳನ್ನು ಒದಗಿಸಲಾಗಿದೆ. ರೈತರಿಗೆ ವಿಶೇಷ ರಕ್ಷಣಾ ಅಂಶಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ. ಇವೂ ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳು ದೊರೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.