ಇಂದು ಕೈ- ಕಮಲ ನಾಯಕರ ಜುಗಲ್ಬಂದಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.27
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ದಿನಕ್ಕೊಂದು ಸಮಾವೇಶಗಳನ್ನು ನಡೆಸುತ್ತ ಜನಮನ ಸೆಳೆಯುವ ಪ್ರಯತ್ನದಲ್ಲಿವೆ. ಇವೆರಡೂ ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರುಗಳು ಫೆ. 28ರಂದು ಗುಲ್ಬರ್ಗ ಜಿಲ್ಲೆಯಲ್ಲಿ ಸಂಚರಿಸುವ ಮೂಲಕ ಜನಮನ ಸೆಳೆಯುವ ಯತ್ನದಲ್ಲಿದ್ದಾರೆ.
ಬಿಜೆಪಿ ತನ್ನ ಪ್ರಧಾನಿ ಹುರಿಯಾಳು ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಗೆಲ್ಲಿಸಿ ರ್ಯಾಲಿಯನ್ನು ಶುಕ್ರವಾರ ಜೇವರ್ಗಿ ರಸ್ತೆಯಲ್ಲಿರುವ ವಾಜಪೇಯಿ ನಗರದಲ್ಲಿ ಆಯೋಜಿಸಿದ್ದರೆ, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಾಡಿಯಲ್ಲಿ ವಾಡಿ- ಗದಗ ಹೊಸ ರೈಲು ಮಾರ್ಗ ಕಾಮಗಾರಿಗೆ ಚಾಲನೆ ನೀಡುವ ಹಾಗೂ ಉದ್ದೇಶಿತ ಗುಲ್ಬರ್ಗ ವಿಭಾಗೀಯ ರೈಲ್ವೆ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮವಿದೆ.
ಹೀಗಾಗಿ ಬಿಜೆಪಿಯ ನಮೋ ರ್ಯಾಲಿ, ಕಾಂಗ್ರೆಸ್ನ ಹಿರಿಯ ನಾಯಕ ಖರ್ಗೆ ನೇತೃತ್ವದಲ್ಲಿ ವಾಡಿ- ಗದಗ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡುವ ಅಭಿವೃದ್ಧಿ ಕಾಮಗಾರಿಗಳೆರಡಕ್ಕೂ ಗುಲ್ಬರ್ಗ ಜಿಲ್ಲೆಯ ಜನ ಒಂದೇ ದಿನ ಸಾಕ್ಷಿಯಾಗಲಿದ್ದಾರೆ.
ಹೇಳಿಕೆಗಳ ಸಮರ: ಗುಲ್ಬರ್ಗ, ಸಚಿವ ಮಲ್ಲಿಕಾರ್ಜುನ ಖರ್ಗೆ ಗೆದ್ದು ಲೋಕಸಭೆ ಪ್ರವೇಶಿಸಿದ ಕ್ಷೇತ್ರ. ಈ ಮೀಸಲು ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆದುಕೊಳ್ಳಬೇಕು ಎಂಬುದು ಕಮಲ ಪಡೆಯ ಆಶಯ. ಅದಕ್ಕೇ ಮೋದಿ ರ್ಯಾಲಿಯನ್ನು ಗುಲ್ಬರ್ಗದಲ್ಲಿ ಆಯೋಜಿಸಿರುವುದು ರಟ್ಟಾದ ಗುಟ್ಟು.
ಗುಲ್ಬರ್ಗ ಅಷ್ಟೇ ಅಲ್ಲ, ಗುಲ್ಬರ್ಗ ಸೇರಿದಂತೆ ಪಕ್ಕದ ಬೀದರ್, ರಾಯಚೂರು, ಕೊಪ್ಪಳ ಕ್ಷೇತ್ರಗಳೂ ಸೇರಿದಂತೆ ಹೈ- ಕ ನೆಲದಲ್ಲಿ ಕಮಲ ಅರಳಬೇಕು ಎಂಬ ಇರಾದೆಯೊಂದಿಗೆ ನಮೋ ರ್ಯಾಲಿಯನ್ನು ಬಿಜೆಪಿ ಗುಲ್ಬರ್ಗದಲ್ಲಿ ಆಯೋಜಿಸಿದೆ. ರ್ಯಾಲಿ ಸಿದ್ಧತೆಗೋಸ್ಕರ ಗುಲ್ಬರ್ಗಕ್ಕೆ ಬಂದ ನಾಯಕರೆಲ್ಲರೂ ಧರಂ- ಖರ್ಗೆ ವಿರುದ್ಧವೇ ವಾಗ್ದಾಳಿ ಮಾಡಿದ್ದಲ್ಲದೆ ನಮೋ ಗಾಳಿಗೆ ಕಾಂಗ್ರೆಸ್ ಹೈ-ಕ ಭಾಗದಲ್ಲಿ ಧೂಳೀಪಟವಾಗಲಿದೆ ಎಂದು ಹೇಳುತ್ತ ರಾಜಕೀಯವಾಗಿ ಈ ನೆಲದಲ್ಲಿ ಚರ್ಚೆಗೆ ವೇದಿಕೆ ರೂಪಿಸಿದ್ದಾರೆ.
ನಮೋ ರ್ಯಾಲಿ ತಮ್ಮ ತವರು ಜಿಲ್ಲೆಯಲ್ಲಿ ಆಯೋಜಿತವಾಗಿರುವುದಕ್ಕೆ ಹಾಗೂ ರ್ಯಾಲಿಗೆಂದು ಬಂದವರೆಲ್ಲರೂ ತಮ್ಮನ್ನೇ ಕೇಂದ್ರೀಕರಿಸಿಕೊಂಡು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಟಾಂಗ್ ನೀಡಲೇಬೇಕು ಎಂದು ಮನದೊಳಗೆ ನಿರ್ಧರಿಸಿದಂತಿರುವ ಮಲ್ಲಿಕಾರ್ಜುನ ಖರ್ಗೆ, ಗುಲ್ಬರ್ಗ ರೈಲ್ವೆ ಪ್ರತ್ಯೇಕ ವಿಭಾಗೀಯ ಕಚೇರಿ ಘೋಷಣೆ ಮಾಡುವ ಮೂಲಕ ವಾರದ ಹಿಂದೆಯೇ ಸಿಕ್ಸರ್ ಬಾರಿಸಿದ್ದರು. ಇದೀಗ ಬರೋಬ್ಬರಿ ನಮೋ ರ್ಯಾಲಿ ದಿನವಾದ ಫೆ. 28ಕ್ಕೇ ವಾಡಿಯಲ್ಲಿ ಹೊಸ ವಿಭಾಗೀಯ ಕಚೇರಿ ಕಟ್ಟಡಕ್ಕೆ ಅಡಿಗಲ್ಲು ಹಾಕುವ ಹಾಗೂ ಹಲವಾರು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ವಾಡಿ-ಗದಗ ಯೋಜನೆಗೆ ಚಾಲನೆ ನೀಡುವ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡು ಜನರ ಲಕ್ಷ್ಯ ಅಭಿವೃದ್ಧಿ ಯೋಜನೆಗಳತ್ತ ಸೆಳೆಯುವ ಯತ್ನ ಮಾಡಿದ್ದಾರೆ.
ಖರ್ಗೆ ರೈಲ್ವೆ ಸಚಿವರಾದ ನಂತರ ಗುಲ್ಬರ್ಗ ಪ್ರಾಂತ್ಯದಲ್ಲಿನ ಅನೇಕ ರೈಲ್ವೆ ಸಮಾರಂಭಗಳಿಗೆ ಸಿದ್ದರಾಮಯ್ಯ ಆಹ್ವಾನಿತರಾಗಿದ್ದರೂ ಭಾಗವಹಿಸಿರಲಿಲ್ಲ. ಆದರೆ ಫೆ. 28ರ ಸಮಾರಂಭಕ್ಕೆ ಸಿದ್ದರಾಮಯ್ಯ ಬರುತ್ತಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಖರ್ಗೆ ತವರಿನಲ್ಲಿ ಸಿದ್ದು-ಖರ್ಗೆ ಜೋಡಿಯಾಗಿ ಪ್ರಮುಖ ಸಮಾರಂಭದ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅದೇ ದಿನ ನರೇಂದ್ರ ಮೋದಿ ಇವರಿದ್ದ ಜಿಲ್ಲೆಯಲ್ಲೇ ಇರುತ್ತಿರುವುದರಿಂದ ಈ ಇಬ್ಬರೂ ನಾಯಕರು ಬಿಜೆಪಿ ಹಾಗೂ ಮೋದಿ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ.
ಬಿರುಗಾಳಿಗೆರ್ಯಾಲಿ ಟೆಂಟ್ ಧೂಳೀಪಟ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ನೇತೃತ್ವದಲ್ಲಿ 'ಭಾರತ ಗೆಲ್ಲಿಸಿ' ಬೃಹತ್ ರ್ಯಾಲಿಗೆ ಫೆ. 28ರ ಶುಕ್ರವಾರ ನಗರದ ಕೋಟನೂರ ರಸ್ತೆಯ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಜಿಡಿಎ ಬಡಾವಣೆಯ 180 ಎಕರೆ ವಿಶಾಲ ಮೈದಾನದಲ್ಲಿ ಹಾಕಲಾಗಿದ್ದ ಟೆಂಟ್, 1 ಲಕ್ಷಕ್ಕೂ ಅಧಿಕ ಕುರ್ಚಿಗಳು ಗುಲ್ಬರ್ಗ ನಗರದಾದ್ಯಂತ ಬೀಸಿದ ಬಿರುಗಾಳಿಗೆ ಹಾಗೂ ಮಳೆಯ ಹೊಡೆತಕ್ಕೆ ಹಾರಿಹೋದ ಪ್ರಸಂಗ ನಡೆದಿದೆ.
ಸಕಲ ಸಿದ್ಧತೆಯಾಗಿತ್ತು: ನಮೋ ರ್ಯಾಲಿ ಆಯೋಜಿಸಿದ್ದ ಬಿಜೆಪಿ ಇನ್ನೇನು ರ್ಯಾಲಿಗೆ ಒಂದು ದಿನ ಬಾಕಿ ಇರುವಾಗಲೇ ಗುರುವಾರ ಬೆಳಗಿನ ಇಡೀ ದಿನ 1 ಲಕ್ಷಕ್ಕೂ ಅಧಿಕ ಕುರ್ಚಿಗಳನ್ನು ಓರಣವಾಗಿ ಜೋಡಿಸಿದ್ದರು. ಜೊತೆಗೆ ರ್ಯಾಲಿಯ ಪ್ರಧಾನ ವೇದಿಕೆ ಹಾಗೂ ಧ್ವನಿವರ್ಧಕ ವ್ಯವಸ್ಥೆ, ಪಾಕಶಾಲೆ, ಸೇರಿದಂತೆ ಅನೇಕ ಸೌಲಭ್ಯಗಳನ್ನು ಮಾಡಲಾಗಿತ್ತು. ಆದರೆ, ಗುರುವಾರ ಸಂಜೆ ಅರ್ಧ ಗಂಟೆ ಬೀಸಿದ ಬಿರುಗಾಳಿ ಹಾಗೂ ಮಳೆ ಹೊಡೆತಕ್ಕೆ ನಮೋ ರ್ಯಾಲಿ ನಡೆಯಬೇಕಿದ್ದ ಪ್ರಧಾನ ವೇದಿಕೆಗೆ ಸಿಂಗರಿಸಿದ ಎಲ್ಲಾ ವ್ಯವಸ್ಥೆಗಳು ಧೂಳಿಪಟವಾದವು. ನಗರಾದ್ಯಂತ ಹಾಕಲಾಗಿದ್ದ ಸ್ವಾಗತ ಕಮಾನುಗಳು ಬಿರುಗಾಳಿ ಹೊಡೆತಕ್ಕೆ ಕಿತ್ತು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದ್ದವು.
ಶೇಷಮೂರ್ತಿ ಅವಧಾನಿ