ಗುಲ್ಬರ್ಗ ಉದ್ಯಮಿಗೆ ಅತ್ಯುತ್ತಮ ರಫ್ತು ಪ್ರಶಸ್ತಿ ಗರಿ
ಗುಲ್ಬರ್ಗ: ಬೆಂಗಳೂರಿನ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ನೀಡುವ ಅತ್ಯುತ್ತಮ ರಫ್ತು ಪುರಸ್ಕಾರ 2013- 14ನೇ ಸಾಲಿಗೆ ಇಲ್ಲಿನ ಎಸ್ಬಿ ಪಾಟೀಲ್ ಸಮೂಹದ ಉದ್ದಿಮೆಗಳ ನಿರ್ದೇಶಕ ಚಂದ್ರಕಾಂತ ಪಾಟೀಲರಿಗೆ ಲಭಿಸಿದೆ.
ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯ್ತು. ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ್ ಹೊಸ ಕೈಗಾರಿಕಾ ನೀತಿ ಬಂಡವಾಳ ಹೂಡಿಕೆಗೆ ಆಕರವಾದ ಮೂಲಸೌಲಭ್ಯ ಒದಗಿಸಿ, ಉದ್ಯೋಗಾವಕಾಶ ಕಲ್ಪಿಸುವುದರ ಜತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದರು.
ಕರ್ನಾಟಕವು ಕೈಗಾರಿಕಾ ಪ್ರಗತಿಯಲ್ಲಿ ಮತ್ತು ದೇಶದಲ್ಲಿ ಅಭಿವೃದ್ಧಿಗೆ ಹೊಂದುವಂತಹ ರಫ್ತಿನಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಯುವ ಉದ್ದಿಮೆದಾರರು ಪ್ರತಿರಂಗದಲ್ಲಿ ದಾಪುಗಾಲು ಹಕುತ್ತಿರುವುದು ಸಂತಸ ತಂದಿದೆ ಎಂದು ಪಾಟೀಲರು ಹೇಳಿದರು. ಹಜ್, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಆರ್. ರೋಷನ್ ಬೇಗ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಎಂ.ಮಹೇಶ್ವರ ರಾವ್ ಇದ್ದರು.