ರೇಲ್ವೆ ವಿಭಾಗೀಯ ಕಚೇರಿ ಕಟ್ಟಡಕ್ಕೆ ಇಂದು ಶಂಕುಸ್ಥಾಪನೆ
ಗುಲ್ಬರ್ಗ: ನಗರದಲ್ಲಿ ಪ್ರತ್ಯೇಕ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪಿಸುವ ಘೋಷಣೆ ಮಾಡಿ, ವಾರದೊಳಗೆ ಆದೇಶ ಹೊರಬೀಳಲಿದೆ ಎಂದಿದ್ದರು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ. ಫೆ.28ರಂದು ವಾಡಿಯಲ್ಲಿ ಆಯೋಜಿಸಿರುವ ವಾಡಿ- ಗದಗ ಹೊಸ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಸಮಾರಂಭದಲ್ಲೇ ಗುಲ್ಬರ್ಗ ವಿಭಾಗೀಯ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಇಡಲಿದ್ದಾರೆ ಎಂದು ಮಧ್ಯ ರೇಲ್ವೆ ಪ್ರಕಟಣೆ ತಿಳಿಸಿದೆ.
ಪಿಡಿಎ ಕಾಲೇಜು ಪಕ್ಕದಲ್ಲಿ ಈಗಾಗಲೇ ನಿರ್ಮಾಣಗೊಳ್ಳುತ್ತಿರುವ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಅಂಟಿಕೊಂಡಿರುವ 43 ಎಕರೆ ಸರ್ಕಾರಿ ಭೂಮಿಯನ್ನು ರೇಲ್ವೆ ವಿಭಾಗೀಯ ಕಚೇರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗುರುತಿಸಿದೆ. ಈಗಾಗಲೇ ವಿಭಾಗೀಯ ಆಡಳಿತ ಕಚೇರಿಯ ಶಾಖಾ ಕಚೇರಿಗೆ ಬಜೆಟ್‌ನಲ್ಲಿ ಮೀಸಲಿಡಲಾಗಿದ್ದ 5 ಕೋಟಿ ಹಣವನ್ನು ಸದ್ಯಕ್ಕೆ ವಿಭಾಗೀಯ ಕಚೇರಿ ಕಟ್ಟಡಕ್ಕೇ ವೆಚ್ಚ ಮಾಡಲಾಗುತ್ತದೆ.
130 ಕೋಟಿ ವೆಚ್ಚದ ಕಾಮಗಾರಿಗೆ ಸಿಎಂ ಚಾಲನೆ: ಚಿತ್ತಾಪುರ ಕ್ಷೇತ್ರದ 130 ಕೋಟಿ ರು. ವೆಚ್ಚದ ವಿವಿಧ ಇಲಾಖೆಗಳ ಕಾಮಗಾರಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 28ರಂದು ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ವಾಡಿಯ ಎಸಿಸಿ ಸುರಕ್ಷಾ ಕ್ಯಾಂಟಿನ್ ಹತ್ತಿರ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿವರ: ಅವರು ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದು, ಶಿಕ್ಷಣ ಇಲಾಖೆಯ ಅದರ್ಶ ವಿದ್ಯಾಲಯದ ಕಟ್ಟಡ ಸೇರಿದಂತೆ ವಿವಿಧ ಗ್ರಾಮಗಳ ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ ರು. 707.66 ಲಕ್ಷ, ಬಿಸಿ ಊಟ ಕೋಣೆಗಳಿಗಾಗಿ ರು. 27.76 ಲಕ್ಷ, ಅರೋಗ್ಯ ಇಲಾಖೆಯ ಎಎನ್‌ಎಂ ಸಬ್ ಸೆಂಟರ್‌ಗಳಿಗಾಗಿ ರು. 1 ಕೋಟಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ ಬ್ರೀಜ್-ಕಂ- ಬ್ಯಾರೆಜ್ ಹಾಗೂ ಇತರೆ ಕಾಮಗಾರಿಗಳಿಗೆ ರು. 4247 ಲಕ್ಷ, ಭೂ ಸೇನಾ ನಿಗಮದಿಂದ ವಿವಿಧ ಕಾಮಗಾರಿಗಳಿಗೆ 1349 ಲಕ್ಷ, ಜಲ ನಿರ್ಮಲ ಇಲಾಖೆ ವತಿಯಿಂದ ಹೆಬ್ಬಾಳದಲ್ಲಿ ರಸ್ತೆ ಚರಂಡಿಗಾಗಿ ರು. 65 ಲಕ್ಷ, ಜೆಸ್ಕಾಂ ಇಲಾಖೆಯಿಂದ ನಿರಂತರ ಜ್ಯೋತಿ ಯೋಜನೆಯಡಿ ರು. 425 ಲಕ್ಷ, ವಾಡಿ ಪುರಸಭೆಯ ವಿವಿಧ ಅಭಿವೃದ್ಧಿಗಾಗಿ ರು. 1418.64 ಲಕ್ಷ, ಹೆದ್ದಾರಿ ಪ್ರಾಧಿಕಾರ ಇಲಾಖೆಯಿಂದ ರು. 2564 ಲಕ್ಷ, ಪಿಎಂಜಿಎಸ್ ವಾಯ್ ಇಲಾಖೆಯ ರು. 775 ಲಕ್ಷ, ಲೋ.ಇ ಚಿತ್ತಾಪುರ ಉಪ ವಿಭಾಗದ ರು. 150 ಲಕ್ಷ, ಲೋ.ಇ. ಕಾಳಗಿ ಉಪ ವಿಭಾಗದ ರು. 1000 ಲಕ್ಷ ಮೀಸಲಿಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೇಂದ್ರ ಪವರ ಲೂಮ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಇದ್ದರು.