ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರ್‌ಟಿಇ: ಅನರ್ಹರ ಆಯ್ಕೆ- ದೂರು

Lingaraj Badiger
Updated On : 1 Mar 2014, 11:19 am

ಯಾದಗಿರಿ: ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಪಾಲಕರು ರಂಗೋಲಿ ಕೆಳಗೆ ನುಸುಳಿರುವ ಪ್ರಕರಣ ಇದು. ಕಡ್ಡಾ ಯ ಶಿಕ್ಷಣ ಹಕ್ಕಿನಡಿ ನಗರದ ಶಾಲೆಗಳಿಗೆ ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ಗಮನಿಸಿದಾಗ ಈ ವಿಷಯ ಬಯಲಾಗಿದೆ.
ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಡ್ಡಾಯ ಶಿಕ್ಷಣ ಹಕ್ಕು(ಆರ್ಟಿಇ) ಕಾಯ್ದೆ ಅಡಿ ನೇಮಕವಾದ ಮಕ್ಕಳ ಪಾಲಕರು ಸುಳ್ಳು ಆದಾಯ ಪ್ರಮಾಣಪತ್ರ ಹಾಗೂ ನಕಲಿ ವಿಳಾಸವನ್ನು ನೀಡಿ ಶಾಲೆಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಮೋಸ ಮಾಡಿದ್ದಾರೆ ಎಂದು ಅನೇಕ ಪಾಲಕರು ದೂರಿದ್ದಾರೆ.
ನಿಯಮದ ಪ್ರಕಾರ ಯಾವ ಶಾಲೆಗೆ ಆ ಮಕ್ಕಳನ್ನು ಸೇರಿಸಬೇಕಾಗಿದೆಯೋ ಪಾಲಕರು ಆ ಬಡಾವಣೆಯ ನಿವಾಸಿಯಾಗಿರಬೇಕು. ಪಾಲಕರ ಆದಾಯ ಕಡಿಮೆ ಇರಬೇಕು.
 ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಾಗಿರಬೇಕು. ಅಂತಹವರ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯಬಹುದು.  
ಆದರೆ ಈಗ ಆಯ್ಕೆಯಾದ ಮಕ್ಕಳಲ್ಲಿ ಹೆಚ್ಚಿನವರ ಪಾಲಕರು ಶ್ರೀಮಂತರಾಗಿದ್ದು ಅವರೆಲ್ಲ ಕಡಿಮೆ ಆದಾಯದ ಪ್ರಮಾಣ ಪತ್ರವನ್ನು ತಂದು ಕಾನೂನುಬಾಹಿರವಾಗಿ ತಮ್ಮ ಮಕ್ಕಳು ಆರ್ಟಿಇ ಅಡಿಯಲ್ಲಿ ಅಯ್ಕೆಯಾಗುವಂತೆ ನೋಡಿಕೊಂಡಿದ್ದಾರೆ.
ಇನ್ನೂ ಕೆಲ ಪಾಲಕರು ತಾವು ವಾಸವಿರುವ ಬಡಾವಣೆಯ ವಿಳಾಸವನ್ನು ಅರ್ಜಿಯಲ್ಲಿ ದಾಖಲಿಸದೆ ಬೇರೆ ಬಡಾವಣೆಯ ವಿಳಾಸವನ್ನು ದಾಖಲಿಸಿದ್ದಾರೆ. ನಿಜವಾಗಿ ಯಾರು ಆ ಬಡಾವಣೆಯ ನಿವಾಸಿಯಾಗಿದ್ದಾರೆಯೋ ಅಂತಹವರ ಮಕ್ಕಳು ಆಯ್ಕೆಯಾಗಿಲ್ಲ.
 ಇದು ಪಾಲಕರು ಶಿಕ್ಷಣ ಇಲಾಖೆಗೆ ಹಾಗೂ ಶಾಲೆಗಳಿಗೆ ವಂಚಿಸಿರುವ ರೀತಿಯಾಗಿದೆ.
ಈಗ ಕಡ್ಡಾಯ ಶಿಕ್ಷಣ ಹಕ್ಕಿನಡಿ ಆಯ್ಕೆ ಮಾಡಿದ ಪಟ್ಟಿಯನ್ನು ರದ್ದುಪಡಿಸಿ ಇನ್ನೊಮ್ಮೆ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲು ಅನೇಕ ಪಾಲಕರು ಆಗ್ರಹಿಸಿದ್ದಾರೆ.

ಕ್ರಮ ಕೈಗೊಳ್ಳಲಾಗುವುದು
ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ನೋಡಿ ಪಾರದರ್ಶಕತೆಯಿಂದ ಶಿಕ್ಷಣ ಹಕ್ಕಿನಡಿ ಮಕ್ಕಳ ಆಯ್ಕೆ ಮಾಡಲಾಗಿದೆ. ಏನಾದರೂ ತಕರಾರು ಇದ್ದರೆ ಸರಿಯಾದ ದಾಖಲೆಗಳನ್ನು ತಂದು ತೋರಿಸಿದರೆ ಕ್ರಮ ಕೈಗೊಳ್ಳಲಾಗುವದು.
  ಪ್ರಭು ಕಣ್ಣನ್, ಕ್ಷೇತ್ರ ಶಿಕ್ಷಣಾಧಿಕಾರಿ, ಯಾದಗಿರಿ.
ಖರ್ಚು ಮಾಡಲಾರೆ
ನಾನು ಕಡು ಬಡವ.  ಕೂಲಿ ಮಾಡಿ ಬದುಕುತ್ತೇನೆ.  ನನ್ನ ಆದಾಯ ಹೆಚ್ಚಿದೆ ಎಂದು ನನ್ನ ಮಗನ ಆಯ್ಕೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಹಣ ಖರ್ಚು ಮಾಡಿ ಓದಿಸುವ ಶಕ್ತಿ ನನ್ನಲ್ಲಿ ಇಲ್ಲ.
  ವೆಂಕಟೇಶ, ವಿದ್ಯಾರ್ಥಿ ಪಾಲಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement